ಹೊಸತು ಭಾವಗಳಿಂದ ಹೊಸತು ಜೀವಗಳಿಂದ
ಹಳೆಯ ಗತ ಭೂತಗಳನೆಲ್ಲ ಮರೆತು
ಮೂಡಿ ಬರುವಾ ನಗೆಯು ಸಂತಸದ ಸಂಕೇತ
ಚಿಮ್ಮುವುದು ಚಿಲುಮೆಯಲಿ ಹೃದಯ ತೆರೆದು
ಹಾಸ್ಯವದು ಉಸಿರಂತೆ ಹೃದಯವಂತಿಕೆಗೆಲ್ಲಉಸಿರಂತೆ ಹೊಸತು ನಸುನಗೆಗೆಲ್ಲಕೂ
ಲಘುನಗೆಯ ಗೆಳೆತನವೇ ಸಂಜೀವಿನಿಯ ಚಿಲುಮೆ
ದುರಿತಕ್ಕು ದುಃಖ ದುಮ್ಮಾನಗಳಿಗೂ
ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ
ಕಾವ್ಯದಲಿ ಕಗ್ಗದಲಿ ಎಲ್ಲ ಲಿಖಿತ
ಕಾಸು ಕರಿಮಣಿ ಇಲ್ಲ ದಿವ್ಯ ಔಷಧಿಗಿಲ್ಲಿ
ಹಾಸ್ಯ ಹುರುಪಿನ ಸೆಲೆಯು ಅರ್ಥಸಹಿತ
ಬನ್ನಿ ಅನುಭವಿಸೋಣ ಮನಸಾರೆ ಸುಖಿಸೋಣ
ಬದುಕಲ್ಲಿ ಮುಕ್ತ ಹಾಸ್ಯವನು ತುಂಬಿ
ತೆರೆದ ಬಾನಿನ ತೆರದಿ ಜಲಪಾತದಂದದಲಿ
ಹೀಗೊಮ್ಮೆ ನಕ್ಕುಬಿಡಿ ಹೃದಯತುಂಬಿ