ಮಂಗಳವಾರ, ಸೆಪ್ಟೆಂಬರ್ 4, 2012

ನೆನಪುಗಳ ಅಂಗಳದಿ


ಪುಸ್ತಕದ ಹರಿದ ಹಾಳೆಗಳನ್ನು ನಾಜೂಕಾಗಿ ಗೋಂದಿನಿಂದ ಅಂಟಿಸಿ ಪುಸ್ತಕಗಳನ್ನು ಮಡಿಸಿಟ್ಟು ಕೂತ ಹರಿಣಿಗೆ ಮತ್ತೆ ಮತ್ತೆ ನೆನಪುಗಳು ಕಾಡಿ ಕೊಲ್ಲುತ್ತಿದ್ದವು. ಅಂಟಿಸಿದ ಪುಸ್ತಕವನ್ನು ಒಲವಿನಿಂದ ಬದಿಗಿಟ್ಟು ಕಿಟಕಿ ತೆರೆದು ತಂಪಾದ ಗಾಳಿಗೆ ಮೊಗವನ್ನು ಒಡ್ಡಿದಳು. ತೆರೆದ ಕಿಟಕಿಯ ಗಾಳಿಗೆ ಪುಸ್ತಕದ ಹಾಳೆಗಳು ತೆರೆದುಕೊಂಡವು. ಜೊತೆಗೆ ಶ್ರೀಕಾಂತನ ನೆನಪುಗಳನ್ನೂ ತೆರೆಯತೊಡಗಿದವು.
ತೆರೆದ ಹಾಳೆಗಳನ್ನೇ ದಿಟ್ಟಿಸಿ ನೋಡಿದ ಹರಿಣಿಯನ್ನು ಅಮೃತಾಳ ಮುಗ್ಧ ಕಂಗಳು ತಿರುಗಿ ದಿಟ್ಟಿಸಿದವು. ಅಂದು ಹರಿಣಿ ಆಸ್ಪತ್ರೆಯಲ್ಲಿ ಕಾಯುತ್ತಾ ತನ್ನದೇ ಭಾವಲೋಕದಲ್ಲಿ ತಲ್ಲೀನಳಾಗಿದ್ದಾಗ ಡಾಕ್ಟರ್ ಸಂತೋಷ್ ಅವರ ಮೂರು ವರ್ಷದ ಕೂಸು ಅಮೃತಾ, ಅವಳ ಕೈಲಿದ್ದ ಪುಸ್ತಕವನ್ನೂ ಕಸಿದುಕೊಂಡು ತುಂಟತನದಿಂದ ಹಾಳೆಗಳನ್ನು ಹರಿದು ಹಾಕಿದ್ದಳು. ಆ ಕಂದನ ಮುಗ್ಧ ಕಂಗಳು, ಸ್ನಿಗ್ಧ ಸೌಂದರ್ಯ ಶ್ರೀಕಾಂತನ ಸರಳತೆಯಂತೆಯೇ ತೋರಿದ್ದವು.

“ಮಿಸ್ಸೆಸ್. ಹರಿಣಿ ಶ್ರೀಕಾಂತ್?” ಎಂದು ನರ್ಸು ಕೂಗಿದ ತಕ್ಷಣ ಎದ್ದು ಒಳಗೆ ಹೋಗಿದ್ದಳು.
“ಏನೂ ತೊಂದರೆಯಿಲ್ಲ ಹರಿಣಿ. ತುಂಬಾ ಆರೋಗ್ಯವಾಗಿದ್ದೀ. ನೀನು ನಿನ್ನ ಕಾಳಜಿ ಹೆಚ್ಚು ತೊಗೋಬೇಕು.ಆಗಲೇ ನಿನ್ನ ಕೂಸಿಗೂ ಆರೋಗ್ಯ. ಡೆಲಿವರಿ ಆಗೋವರೆಗೂ ಪೌಷ್ಠಿಕ ಆಹಾರ ಸತತವಾಗಿ ತೊಗೋಬೇಕು. ನಂತರದ ಪಥ್ಯ ನಿನಗೆ ಸಮಯ ಬಂದಾಗ ಹೇಳ್ತೇನೆ. ಯಾವುದೇ ದುಃಖ ಟೆನ್ಶನ್ ಗಳನ್ನ ಮನಸ್ಸಿಗೆ ಹಚ್ಚಿಕೊಳ್ಳಬಾರದು. ನಿನ್ನ ಮಾನಸಿಕ ಸ್ಥಿಮಿತ, ಪ್ರಫುಲ್ಲತೆ ಈಗ ಬಹಳ ಮುಖ್ಯ. ಯಾವಾಗ ಕಸಿವಿಸಿ ಅನ್ನಿಸಿದರೂ ನನಗೆ ತಕ್ಷಣ ಫೋನ್ ಮಾಡು. ಆಯ್ತಾ?” ಅಂತ ಡಾಕ್ಟರ್. ಸ್ಮಿತಾ ಹೇಳಿದ್ದರು. ನಂತರ ತಲೆಯಾಡಿಸಿ ಎದ್ದು ನಿಲ್ಲುತ್ತಿದ್ದ ಹರಿಣಿಯನ್ನು ಮತ್ತೆ ಕೈಹಿಡಿದು, “ಬಿ ಬ್ರೇವ್ ಹರಿಣಿ. ನಾವೆಲ್ಲಾ ನಿನ್ನ ಜೊತೆಗಿದ್ದೇವೆ.” ಎಂದು ಧೈರ್ಯ ಹೇಳಿದ್ದರು. 
ಆಸ್ಪತ್ರೆಯ ಕಾರಿಡಾರಲ್ಲಿ ನಡೆದು ಬರುತ್ತಿದ್ದ ಹರಿಣಿಗೆ ಅಷ್ಟು ಪರಿಚಿತವಿದ್ದ ಗೋಡೆ ಕಿಟಕಿಗಳು, ನಡೆಯುತ್ತಿದ್ದ ನೆಲ, ಸುತ್ತಲಿನ ಪರಿಸರ, ಗಾಳಿಯೂ ಅಂದೇಕೋ ಹಠಾತ್ತನೆ ಬೇರೆಯೇ ಲೋಕದಷ್ಟು ಅಪರಿಚಿತವಾಗಿ ಕಂಡವು. ಶ್ರೀಕಾಂತನ ಕೊಠಡಿಯ ಬಾಗಿಲಿಗೆ ಬೀಗ ಬಿದ್ದಾಗಿತ್ತು. ಅಲ್ಲೇ ನಡೆಯುತ್ತಿದ್ದ ನರ್ಸ್ ಒಬ್ಬಳನ್ನು ಕರೆದು, “ ಡಾಕ್ಟರ್. ಶ್ರೀಕಾಂತ್ ಅವರ ಕೊಠಡಿಯನ್ನು ತೆರೆದು ಕೊಡಲು ಸಾಧ್ಯವಾ? ಕೆಲವು ವಸ್ತುಗಳು ಉಳಿದುಹೋಗಿವೆ.” ಎಂದು ಕೇಳಿದ್ದಳು. “ಅಗತ್ಯವಾಗಿ, ಕೂತ್ಕೊಳ್ಳಿ ಹರಿಣಿ ಮೇಡಂ. ಪರ್ಮಿಷನ್ ಕೇಳಿ ಚಾಬಿ ತರಿಸಿ ಕೊಡ್ತೀನಿ.” ಎಂದು ಹೇಳಿ ರೂಮನ್ನು ತೆರೆಸಿದ್ದಳು. ಒಳಗೆ ಕಾಲಿಡುತ್ತಿದ್ದಂತೆಯೇ ಶ್ರೀಕಾಂತನ ದನಿಯ ಪುನರುಚ್ಛಾರ....
“ನಮಸ್ಕಾರ, ಕೂತ್ಕೊಳಿ. ಏನಾಯಿತು?” ಶ್ರೀಕಾಂತ ಕೇಳಿದ.
“ಸ್ಟೂಲು ಹಾಕಿಕೊಂಡು ಅಟ್ಟದ ಮೇಲಿಂದ ಸಾಮಾನು ಇಳಿಸೋದಕ್ಕೆ ಹೋಗಿ ಕಾಲು ಜಾರಿ ಬಿದ್ದುಬಿಟ್ಟಳು.” ಹರಿಣಿಯ ತಂದೆ ಹೇಳಿದರು.
“ಎಲ್ಲಿ ನೋಡುವ” ಶ್ರೀಕಾಂತ ಮೆಲ್ಲಗೆ ಹರಿಣಿಯ ಪಾದವನ್ನು ಹಿಡಿದು ಪರೀಕ್ಷಿಸಿದ.
“ಏನೂ ಆಗಿಲ್ಲ. ಸಣ್ಣ ಉಳುಕು ಅಷ್ಟೇ. ಊತ ಹೆಚ್ಚಿರೋದ್ರಿಂದ ಸ್ವಲ್ಪ ಸಮಯ ಬೇಕಾಗಬಹುದು. ನೋವು ಕಡಿಮೆಯಾಗಲಿಕ್ಕೆ ಮಾತ್ರೆ ಬರೆದಿದ್ದೇನೆ. ಈ ತೈಲದಿಂದ ಪ್ರತಿದಿನ ಬೆಳಿಗ್ಗೆ, ಸಂಜೆ ಮಸಾಜ್ ಮಾಡಬೇಕು. ಎಷ್ಟು ವಿಶ್ರಾಂತಿ ಕೊಡ್ತೀರೋ ಅಷ್ಟು ಬೇಗ ಗುಣವಾಗುತ್ತೆ”

ಶ್ರೀಕಾಂತನನ್ನು ಮೊದಲು ನೋಡಿದ್ದು ಇಲ್ಲಿಯೇ. ಒಂದೇ ಬಾರಿ ನೋಡಿದ್ದರೂ ಮರೆಯಲಾಗದ ಮುಖ. ಸ್ಫುರದ್ರೂಪಿ. ಒಂದೂವರೆ ತಿಂಗಳ ನಂತರ ಹರಿಣಿ, ಮತ್ತೆ ತಂದೆಯೊಡನೆ ಶ್ರೀಕಾಂತನನ್ನು ಭೇಟಿಯಾಗಿದ್ದಳು. ಅವಳಿಗೆ ಸಂಪೂರ್ಣ ಗುಣವಾಗಿತ್ತು, ಈ ಬಾರಿ ಅವಳ ತಂದೆಗೆ ಒಂದು ವಾರದಿಂದ ಮಂಡಿ ನೋವು ಬಾಧಿಸತೊಡಗಿತ್ತು. ಅವಳ ತಂದೆಗೆ ಔಷಧಿ ಕೊಡಿಸಿ ಕೊಠಡಿಯಿಂದಾಚೆ ಬರುತ್ತಿರುವಾಗಲೇ, ಹರಿಣಿಯ ತಂದೆಗೆ ತಮ್ಮ ಹಳೆಯ ಗೆಳೆಯರೊಬ್ಬರ ಭೇಟಿಯಾಯಿತು. ಭೇಟಿಯಾದವರ ಹೆಸರು ಗೋಪಾಲರಾಯರೆಂದು, ಅವರು ಕಾಲೇಜಿನಲ್ಲಿ ಅವಳ ತಂದೆಯ ಸಹಪಾಠಿ ಎಂದು, ಮತ್ತು ಶ್ರೀಕಾಂತನ ಸೋದರ ಮಾವನೆಂದು ಹರಿಣಿಗೆ ತಿಳಿಯಿತು. ಹೀಗೆ ಪ್ರಾರಂಭವಾದ ಹಳೆಯ ಗೆಳೆತನದ ದ್ವಿತೀಯಾರ್ಧ ಆಗಾಗ ಮನೆಗೆ ಬಂದು ಹೋಗುವ ಆತ್ಮೀಯ, ಕೌಟುಂಬಿಕ ಸ್ನೇಹವಾಗಿ ಬೆಳೆದಿತ್ತು. ಎರಡೂ ಕುಟುಂಬದ ಹಿರಿಯರೂ ಶ್ರೀಕಾಂತ ಮತ್ತು ಹರಿಣಿಯ ಮದುವೆಯ ಪ್ರಸ್ತಾಪ ಆಗಲೇ ಮಾಡಿದ್ದರು. ವಿಷಯ ಇಬ್ಬರ ಮುಂದೆ ಇಟ್ಟಾಗ, “ಸಮಯ ಬೇಕು”, “ಯೋಚಿಸಬೇಕು” ಎಂದು ಸುಳ್ಳೇ ಸಬೂಬುಗಳನ್ನು ಹೇಳಿಕೊಳ್ಳುವುದರಲ್ಲಿಯೇ ಸಾಕಷ್ಟು ಸಮಯ ಕದ್ದು ಆಸ್ವಾದಿಸಿದ್ದುಂಟು.

ನಿಶ್ಚಿತಾರ್ಥದ ನಂತರ ಇಬ್ಬರೇ ಭೇಟಿಯಾದಾಗ ಶ್ರೀಕಾಂತ ತನ್ನ ವೃತ್ತಿಯ ಬಗ್ಗೆ ಅವಳೊಂದಿಗೆ ಮಾತನಾಡಿದ್ದ. ವೈದ್ಯನಾಗಿ ಅಭ್ಯಸಿಸುತ್ತಿದ್ದರೂ ಮುಂದೆ ಓದುವ ಇರಾದೆ, ಕುಟುಂಬಕ್ಕೆ ಸಮಯ ಕೊಡಲು ಸಾಧ್ಯವಾಗದ ಕೆಲವು ಅನಿವಾರ್ಯತೆಗಳು, ಆ ಅನಿವಾರ್ಯತೆಗಳನ್ನು ಅವಳು ಸ್ವೀಕರಿಸಬೇಕಾದ ರೀತಿ, ಅವಳಿಂದ ಅವನು ನಿರೀಕ್ಷಿರುವ ಬೆಂಬಲ, ಎಲ್ಲದರ ಬಗ್ಗೆಯೂ ಅವನು ಮನಬಿಚ್ಚಿ ಹೇಳಿಕೊಂಡಿದ್ದ. ಅವನ ಆ ಪ್ರಾಮಾಣಿಕತೆ, ಅವಳಿಗೆ ಕೊಟ್ಟ ಪ್ರಾಮುಖ್ಯತೆ, ಅವಳೊಂದಿಗೆ ಇದ್ದಾಗ ಅವನು ನೀಡುತ್ತಿದ್ದ ಕಂಫರ್ಟ್ , ಎಲ್ಲವೂ ಅವನ ಮೇಲೆ ಅವಳಿಗಿದ್ದ ವಿಶ್ವಾಸವನ್ನು ಒಲವನ್ನೂ ಹೆಚ್ಚಿಸುತ್ತಿದ್ದವು. ಅವರಿಬ್ಬರ ಮಧ್ಯೆ ದಿನವಿಡೀ ಮಾತನಾಡುವ ಹುಚ್ಚು ಕಾತರವಿರಲಿಲ್ಲ, ಒಬ್ಬರ ಸಮಯವನ್ನು ಇನ್ನೊಬ್ಬರು ಕಿತ್ತುಕೊಳ್ಳುವ ಪೋಸೆಸಿವ್ನೆಸ್ಸ್ ಇರಲಿಲ್ಲ, ಹಗಲೆಲ್ಲಾ ಊರು ಸುತ್ತುವ ಶೋಕಿಯಿರಲಿಲ್ಲ, ಅಪರೂಪದ ಭೇಟಿಗಳಲ್ಲಿ ತಮ್ಮ ಪ್ರೇಮವನ್ನು ದೈಹಿಕವಾಗಿ ಪ್ರದರ್ಶನಕ್ಕಿಡುವ ಚೆಲ್ಲಾಟವಿರಲಿಲ್ಲ, ಗಂಟೆಗಟ್ಟಲೆ ಮಾತನಾಡುವ ಫೋನ್ ಕಾಲ್ ಗಳಿರಲಿಲ್ಲ, ವೈಭವೀಕರಣವಿರಲಿಲ್ಲ . ಇಬ್ಬರ ನಡುವೆ ನೇರ ನುಡಿಗಳಿದ್ದವು, ಮೌನಗಳಿದ್ದವು, ಸೌಜನ್ಯವಿತ್ತು, ಸಹಜತೆಯಿತ್ತು, ಮಾತುಗಳಲ್ಲಿ ಚೈತನ್ಯವಿತ್ತು, ಆಲಿಸುವ ವ್ಯವಧಾನವಿತ್ತು, ಕಾಯುವ ಸಹನೆಯಿತ್ತು, ಅರ್ಥೈಸಿಕೊಳ್ಳುವ ನಲುಮೆಯಿತ್ತು, ಪ್ರಾಮಾಣಿಕತೆಯಿತ್ತು. ಶ್ರೀಕಾಂತ ಹರಿಣಿಯ ಪ್ರೌಢತೆಗೆ, ಮುಕ್ತತೆಗೆ, ಚೆಲುವಿಗೆ, ಮಾತುಗಳಿಗೆ ಮಾರುಹೋಗಿದ್ದ. ಅವಳಲ್ಲಿದ್ದ ಸಿಂಪ್ಲಿಸಿಟಿ  ಅವನನ್ನು ಇನ್ನಿಲ್ಲದಂತೆ ಸೆಳೆದಿತ್ತು.


ಶ್ರೀಕಾಂತನಲ್ಲಿದ್ದ ವೈಚಾರಿಕತೆಯನ್ನು ಹರಿಣಿ ಮೆಚ್ಚಿಕೊಂಡಿದ್ದಳು. ಅವನು ಆಕರ್ಷಕ ಮಾತುಗಾರನಲ್ಲ. ಆದರೆ ಅವನಲ್ಲಿ ವಿಚಾರಗಳ ಮತ್ತು  ಆದರ್ಶಗಳ ಶ್ರೀಮಂತಿಕೆಯಿತ್ತು. ಎಲ್ಲರ ಜೊತೆ ಎಷ್ಟು ಸೌಮ್ಯವಾಗಿ ಬೆರೆತು ಮಾತನಾಡುತ್ತಿದ್ದನೋ, ಅಗತ್ಯ ಬಿದ್ದಾಗ ಅಷ್ಟೇ ಕಟುವಾಗಿ ಕಡ್ಡಿ ತುಂಡು ಮಾಡಿದ ಹಾಗೆ ಮಾತನಾಡುವ ಜಾಣ್ಮೆ ಅವನಲ್ಲಿ ಇತ್ತು. ಶ್ರೀಕಾಂತ ಪ್ರಚಂಡ ಬುದ್ಧಿವಂತನೆಂದು ಹರಿಣಿ ಆಗಾಗ ಹೊಗಳುತ್ತಿದ್ದಳು. ಕೆಲವೊಮ್ಮೆ ಆ ಪ್ರಶಂಸೆಯನ್ನು ಅವಳ ಬಾಯಿಂದ ಕೇಳುವುದಕ್ಕಾಗಿಯೇ, ಹೊಸ ವಿಚಾರಗಳನ್ನೂ ಅವಳೊಂದಿಗೆ ಹಂಚಿಕೊಳ್ಳುತ್ತಿದ್ದ ಶ್ರೀಕಾಂತ. ಅವನನ್ನು ಬಣ್ಣಿಸುವುದರಲ್ಲಿ ಅವಳೂ ಸುಖಿಸುತ್ತಿದ್ದಳು. ಅವನು ಅವಳಿಗಾಗಿ ಕೆಂಪು ಗುಲಾಬಿಯ ಗುಚ್ಛಗಳನ್ನಾಗಲಿ, ಮೃದು ಬೊಂಬೆಗಳನ್ನಾಗಲಿ, ಬಟ್ಟೆಗಳನ್ನಾಗಲಿ ಖರೀದಿಸಿ ನೀಡುತ್ತಿರಲಿಲ್ಲ, ಅವಳೂ ಅದನ್ನು ನಿರೀಕ್ಷಿಸುತ್ತಿರಲಿಲ್ಲ. ಸಣ್ಣ ಉಡುಗೊರೆಗಳಲ್ಲಿ, ಸಂಕ್ಷಿಪ್ತ ಭೇಟಿಗಳಲ್ಲಿ ಅವರ ಸಂಭ್ರಮವಿತ್ತು. ಸಂಭ್ರಮ ಮನೆಯೆಲ್ಲ ಹರಡುವ ಕಾಲ ಕೂಡಿ ಬರಲು ತಡವಾಗಲಿಲ್ಲ. ಸಂತಸದಿಂದ ಇಬ್ಬರೂ ಸುಖಗಳನ್ನೂ, ದುಃಖಗಳನ್ನೂ ಹಂಚಿಕೊಳ್ಳುವ ಭಾಷೆಯಿತ್ತರು.

ಮದುವೆಯ ನಂತರ ಶ್ರೀಕಾಂತ್ ಹರಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ತನ್ನ ಸಹೋದ್ಯೋಗಿಗಳಿಗೆ ಪರಿಚಯ ಮಾಡಿಕೊಟ್ಟಿದ್ದ. ಆಸ್ಪತ್ರೆಯ ಕೆಲಸಗಳ ನಡುವೆ ಊಟ ತಂದುಕೊಡುತ್ತಿದ್ದ ಹರಿಣಿಗೆ ಕಾಯುತ್ತಿರುತ್ತಿದ್ದ. ಅಂದೊಂದು ದಿನ ಅವಳು ಬರುತ್ತಿದ್ದಂತೆಯೇ ಮೊದಲ ಗುಲಾಬಿಯನ್ನು ಕೈಗಿಟ್ಟು, ಅಚ್ಚರಿಯಲ್ಲಿ ಅಪ್ಪಿಕೊಂಡಿದ್ದ. ಎರೆಡು ವರ್ಷ ಸಿಹಿ ಕಹಿಗಳೊಂದಿಗೆ ಮದುವೆಯ ಸುಮಧುರ ಬಂಧನದಲ್ಲಿದ್ದ ಅವರಿಬ್ಬರಿಗೆ ಹೊಸ ಅತಿಥಿ ಬರುವ ಸಿಹಿ ಸುದ್ದಿ ಸಾರ್ಥಕತೆಯ ಖುಷಿಯನ್ನು ತಂದಿತ್ತು. ಅವಳಂತೆಯೇ ಹೊಳೆವ ಕಂಗಳ ಕಂದ ಪುಟ್ಟ ಕೈ ಕಾಲುಗಳನ್ನು ಆಡಿಸಿ ಎತ್ತಿಕೊಂಡಾಗ ಅವನ ಹೆಗಲ ಮೇಲೆ ತಲೆಯಿರಿಸಿ ಮಲಗುವ ಭವಿಷ್ಯತ್ಕಾಲದ ಕಲ್ಪನೆಯೇ ಅವನಲ್ಲಿ  ಬೆಚ್ಚನೆಯ ನವೀನ ಸಂಚಲನ ಉಂಟು ಮಾಡುತ್ತಿತ್ತು. ಇಬ್ಬರೂ ಒಟ್ಟಿಗೆ ಕೂತು ಬರಲಿರುವ ಪುಟ್ಟ ಚಿನಕುರುಳಿಗೆ ಹೆಸರುಗಳನ್ನು ಬರೆದಿಡುತ್ತಿದ್ದರು. ಐದು ತಿಂಗಳ ಹೊಸ್ತಿಲಲ್ಲಿದ್ದ ಹರಿಣಿಯ ಹೊಟ್ಟೆಯ ಮೇಲೆ ಕಿವಿಯಿಟ್ಟು ಶ್ರೀಕಾಂತ್, ಹೃದಯ ಬಡಿತ ಕೇಳುವ ಹೊಸ ಪಿತೃತ್ವದ ಅನುಭವ ಪಡೆದುಕೊಳ್ಳುತ್ತಿದ್ದ. ಕುಡಿಯೊಡೆಯುತ್ತಿದ್ದ ಹೊಸ ಜೀವದ ಹೊಸ ಹುರುಪು ಮನೆಯಲ್ಲಿ ತುಳುಕಾಡುತ್ತಿತ್ತು. ಕೆಲಸದ ವೇಳೆಯಲ್ಲೂ ಶ್ರೀಕಾಂತ್ ಸಂಭ್ರಮವನ್ನು ನೆನೆ ನೆನೆದು ಪುಟಿದೇಳುತ್ತಿದ್ದ.   

ಅವನ ಕೊಠಡಿಯ ದೊಡ್ಡ ಕಿಟಕಿಯಿಂದ ಎದುರಿನ ಜನನಿಬಿಡ ರಸ್ತೆಯ ಉದ್ದಗಲವೂ ಕಾಣುತ್ತಿತ್ತು. ಶ್ರೀಕಾಂತ್, ತನ್ನ ಗಡಿಬಿಡಿಯ ದಿನಚರಿಯಲ್ಲಿ ಕೆಲ ಕ್ಷಣಗಳ ಬಿಡುವು ಸಿಕ್ಕಿದರೂ  ಸಾಕು, ಆ ರಸ್ತೆಯನ್ನು ನೋಡುತ್ತಿದ್ದ. ಕಿಟಕಿಯಿಂದ ಬರುವ ತಂಗಾಳಿಯನ್ನು ಆಸ್ವಾದಿಸುತ್ತಿದ್ದ.
ಅದೇ ಕಿಟಕಿಯ ಕಡೆ ಮುಖ ಮಾಡಿ ನೆನಪುಗಳನ್ನು ಮೆಲುಕುಹಾಕುತ್ತಿದ್ದಳು ಹರಿಣಿ, ಅದೇ ಮೇಜು, ಅದೇ ಕುರ್ಚಿಗಳು, ಅದೇ ಬಾಗಿಲ ಮರೆ. ತೆರೆದ ಕಿಟಕಿಗಳು, ಶ್ರೀಕಾಂತನ ತೆರೆದ ಮನಸ್ಸು, ತೆರೆದ ತೋಳುಗಳನ್ನು ನೆನೆಪಿಸಿದವು. ಕಿಟಕಿಯಾಚೆ ದೃಷ್ಟಿ ಹರಿಸಿದರೆ ಮತ್ತೆ ಅವನದ್ದೇ ದನಿ, “ನಿನಗೆ ಅಲ್ಲಿಂದಲೇ ಗುಲಾಬಿ ಹೂ ತಂದಿದ್ದು” , “ಅಲ್ಲೊಂದು ಹೊಸ ಫುಡ್ ಪಾಯಿಂಟ್ ತೆರೆದಿದೆ. ಈ ಸಂಜೆ ನಿನಗೆ ಅಲ್ಲೇ ಟ್ರೀಟ್”... ಪಕ್ಕದಲ್ಲೇ ನಿಂತು ರಸ್ತೆಯೆಡೆಗೆ ಬೆಟ್ಟು ಮಾಡಿ ಮಾತಾಡುತ್ತಿದ್ದ ಶ್ರೀಕಾಂತ ಇದ್ದಕ್ಕಿದ್ದಂತೆಯೇ ಮಾಯವಾಗಿದ್ದ.

ಕೊಠಡಿ ತೆರೆಸಿ ಕೊಟ್ಟಿದ್ದ ನರ್ಸು ಮತ್ತೆ ಬಂದು “ಮೇಡಂ, ನೀವು ಬಂದು ಆಗಲೇ ಅರ್ಧ ಘಂಟೆ ಆಗುತ್ತಾ ಬಂತು. ಏನು ಬೇಕಿತ್ತು? ಸಿಕ್ಕಿತೇ? ನಾನು ಹುಡುಕಲಿಕ್ಕೆ ಸಹಾಯ ಮಾಡಲೇ?” ಎಂದಿದ್ದಳು.
“ಸಾರಿ ಸಿಸ್ಟರ್, ಅದು ಸಿಗುತ್ತಿಲ್ಲ. ನಾನು ಹೊರಡುತ್ತೇನೆ. ತುಂಬಾ ಥ್ಯಾಂಕ್ಸ್” ಎಂದು ಹೇಳಿ ಹೊರಟಿದ್ದಳು.
ಕೊಠಡಿಯಿಂದ ಹೊರಬಂದು ಮೆಟ್ಟಿಲುಗಳನ್ನಿಳಿದು ಬಂದಳು. ಎಮೆರ್ಜೆನ್ಸಿ ಕ್ಯಾಶುಯಲಿಟಿ ಕಣ್ಣಿಗೆ ಬಿತ್ತು..
ಮತ್ತೆ ನೆನಪುಗಳ ಹಾವಳಿ...
“ಆಕ್ಸಿಡೆಂಟ್ ನಲ್ಲಿ ಶ್ರೀಕಾಂತ್ ಅವರಿಗೆ ಹೊಡೆದ ಕಾರಿನಿಂದ ಅವರ ರಿಬ್ ಕೇಜ್ ಗೆ ಹೊಡೆತ ಬಿದ್ದಿದೆ. ಅದು ಚೂರಾಗಿ, ಹೃದಯಕ್ಕೆ ಘಾಸಿಯಾಗಿದೆ. ಅಷ್ಟಲ್ಲದೇ ಗಾಯಗಳಿಂದ ಸಾಕಷ್ಟು ರಕ್ತ ಹೋಗಿದೆ. ಹೃದಯ ಬಹಳ ಕುಂಠಿತವಾಗಿದೆ. ಏನೂ ಹೇಳೋಕಾಗಲ್ಲ. ಹರಿಣಿ, ವಿ ವಿಲ್ ಟ್ರೈ ಅವರ್ ಬೆಸ್ಟ್.” ಡಾಕ್ಟರ್ ಸಂತೋಷ್ ಹೇಳಿದ್ದರು.
ನಾಲ್ಕು ಘಂಟೆಗಳು ಹೊರಗೆ ನಿಂತು ಕಾದ ಸಮಯ ಹರಿಣಿಯ ಜೀವನದ ಅತಿ ದೊಡ್ಡ ನಾಲ್ಕು ಘಂಟೆ. ಚಡಪಡಿಕೆಗೆ ಹೃದಯ ಸುತ್ತಲಿದ್ದ ಇಪ್ಪತ್ತು ಮಂದಿಗೆ ಕೇಳುವ ಹಾಗೆ ಬಡಿದುಕೊಳ್ಳುತ್ತಿದ್ದ ಹಾಗೆ ಹರಿಣಿಗೆ ಭಾಸವಾಗಿತ್ತು. ತನ್ನೊಳಗೆ ಮಿಡಿಯುತ್ತಿದ್ದ ಆ ಪುಟ್ಟ ಜೀವದ ಹೃದಯ ಅವಳಲ್ಲಿ ಇನ್ನೂ ಭಯ ಹುಟ್ಟಿಸಿತ್ತು. ನಾಲ್ಕು ಘಂಟೆಗಳ ಸತತ ಪ್ರಯತ್ನದ ನಂತರವೂ ಸಂತೋಷ್ ಕೊಟ್ಟ ಉತ್ತರ, “ಸಾರಿ ಹರಿಣಿ, ನಾವು ಶಕ್ತಿ ಮೀರಿ ಪ್ರಯತ್ನ ಪಟ್ಟೆವು. ಆದರೂ ಶ್ರೀಕಾಂತನನ್ನು ನ್ನ ಉಳಿಸೋಕೆ ಆಗ್ಲಿಲ್ಲ. ಐ ಆಮ್ ರಿಯಲಿ ಸಾರಿ”
ಅವೇ ಪದಗಳು ಹರಿಣಿಯ ಕಿವಿಯಲ್ಲಿ ಪ್ರತಿಧ್ವನಿಸತೊಡಗಿದವು... ಶ್ರೀಕಾಂತನನ್ನ ಉಳಿಸೋಕೆ ಆಗ್ಲಿಲ್ಲ...
ಮತ್ತೆ ಕಂಬನಿಗಳನ್ನು ಮಿಡಿದು ಆಸ್ಪತ್ರೆಯಿಂದ ಹೊರನಡೆದಿದ್ದಳು. ರಸ್ತೆಯಲ್ಲಿ ನಡೆದು ಬರುವಾಗಲೂ ಶ್ರೀಕಾಂತನ ಜೊತೆಗೆ ಸಿನಿಮ ನೋಡಿದ ಥಿಯೇಟರು, ಅವನ ಜೊತೆ ಖುಷಿಯಲ್ಲಿ ಸುತ್ತಿದ ಫೂಟ್ಪಾಥ್ಗಳು, ಅವನೊಂದಿಗೆ ಪಾನಿಪುರಿ ತಿಂದ ಗಾಡಿಗಳು, ಅವಳ ಹುಟ್ಟುಹಬ್ಬಕ್ಕೆ ಅವಳಿಗೆ ಇಷ್ಟವಾದ ಕೇಕ್ ತಂದ ಬೇಕರಿ, ಅವರ ಮದುವೆಯ ಉಂಗುರಗಳನ್ನು ಕೊಂಡ ಚಿನ್ನದ ಅಂಗಡಿ, ಅವರ ಮೊದಲ ಖಾಸಗಿ ಭೇಟಿಗೆ ಸಾಕ್ಷಿಯಾದ ಪಾರ್ಕು, ರಾಶಿ ರಾಶಿ ಪುಸ್ತಕಗಳನ್ನೂ, ಸಿ ಡಿ ಗಳನ್ನು ಕೊಂಡ ಅಂಗಡಿಗಳು, ಯಾವಾಗಲೂ ಕಾರು ನಿಲ್ಲಿಸುತ್ತಿದ್ದ ನಿಲುಗಡೆ, ಎಲ್ಲವೂ ಶ್ರೀಕಾಂತನ ನೆನಪು ಮೂಡಿಸುತ್ತಿದ್ದವು.
ಕಣ್ಣಿಗೆ ಬಿದ್ದ ಪ್ರತಿಯೊಂದು ದೃಶ್ಯ, ಕಿವಿಗೆ ಬಿದ್ದ ಪ್ರತಿಯೊಂದು ಶಬ್ದ, ವಾಸ್ತವವನ್ನು ನಿರಾಕರಿಸಿ ಶ್ರೀಕಾಂತನ ಇರುವಿಕೆಯನ್ನು ಹೆಜ್ಜೆ ಹೆಜ್ಜೆಗೂ ನಿರೂಪಿಸುವ ಹಠಕ್ಕೆ ಬಿದ್ದ ಹಾಗಿದ್ದವು. ತನ್ನೊಳಗಿದ್ದ ಅವನ ಜೀವವೂ ಸಹ.

ರಸ್ತೆಯುದ್ದಕ್ಕೂ ಯಾಂತ್ರಿಕವಾಗಿ ಹೆಜ್ಜೆ ಹಾಕುತ್ತ ಮನೆ ಸೇರಿದ್ದಳು. ಬಾಗಿಲು ತೆರೆದು ದೀಪಗಳನ್ನು ಹಚ್ಚಿ ಸುತ್ತ ನೋಡಿದಳು. ಎಲ್ಲವೂ ಖಾಲಿ ಖಾಲಿ. ಮನೆಯೂ, ಮನಸ್ಸೂ! ಮನೆಯ ಪ್ರತಿಯೊಂದು ವಸ್ತುವೂ ಅವನ ನಿಸ್ವಾರ್ಥ ಒಲವನ್ನು ಬಿಂಬಿಸುತ್ತಿದ್ದವು. ಅವನು ನಗಿಸಿದ, ಅಳಿಸಿದ, ಅಪ್ಪಿಕೊಂಡ, ಮುತ್ತಿಟ್ಟ, ಛೇಡಿಸಿದ, ಜಗಳವಾಡಿದ, ಒಲಿಸಿಕೊಂಡ, ಪ್ರೇಮಿಸಿದ ಘಳಿಗೆಗಳನ್ನು ನೆನಪಿಗೆ ತರುವ ಪಣ ತೊಟ್ಟು ನಿಂತಿದ್ದವು.
ನಿಂತಲ್ಲೇ ಕುಸಿದು, ಸಣ್ಣ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳತೊಡಗಿದ್ದಳು. ಧ್ವನಿಯು ಅಸಹನೀಯ ಖಾಲಿತನದ ಕಡಲಿನಲ್ಲಿ ಮುಳುಗಿ ಹೋಗಿತ್ತು. ಮನಸ್ಪೂರ್ತಿಯಾಗಿ ಅತ್ತು ಶೂನ್ಯ ದೃಷ್ಟಿಯಲ್ಲಿ ದೀರ್ಘಕಾಲ ಕೂತಲ್ಲಿಯೇ ಕುಳಿತಿದ್ದಳು. ಕಣ್ಮುಚ್ಚಿ ತೆರೆದು, ಮೇಜಿನ ಮೇಲಿದ್ದ ಹರಿದ ಪುಸ್ತಕದ ಕಡೆ ಕಣ್ಣು ಹಾಯಿಸಿದ್ದಳು. ಗಾಳಿಗೆ ತೆರೆದ ಪುಟಗಳು ವರ್ತಮಾನದ ಗೋಡೆಗಳನ್ನು ಮೀರಿ ಶ್ರೀಕಾಂತನ ನೆನಪುಗಳನ್ನು ಬೆನ್ನತ್ತಿದ್ದವು.
ಏನು ಮಾಡಲೂ ಉತ್ಸಾಹವಿಲ್ಲದೆ ಮಂಚದ ಮೇಲೆ ಕೂತು ಅವರಿಬ್ಬರ ಭಾವಚಿತ್ರವೊಂದನ್ನು ದಿಟ್ಟಿಸತೊಡಗಿದಳು. ತನ್ನ ಹೊಟ್ಟೆಯನ್ನು ಸ್ಪರ್ಶಿಸಿದಳು. ಅಲ್ಲಿ ಅವನೇ ಇದ್ದನು. ಅವನ ಕೊನೆಯ ಜೀವಂತಿಕೆಯಿತ್ತು. ದುಃಖದ ಸಣ್ಣ ನಗೆಯೊಂದನ್ನು ನಕ್ಕು, ರೇಡಿಯೋ ಹಾಕಿ ದಿಂಬಿನ ಮೇಲೆ ತಲೆ ಇಟ್ಟಳು.
“ನೆನಪುಗಳಾ ಅಂಗಳದಿ... ನಿನ್ನ ನಗೆಯ ತುಂಬಿಕೊಂಡ ಬೆಳದಿಂಗಳು...”  ಹಾಡು ಸಣ್ಣಗೆ ತೇಲಿ ಬರುತ್ತಿತ್ತು. 
ನಿದ್ರಿಸುವ ಯತ್ನದಲ್ಲಿ ಮುಚ್ಚಿದ ಕಣ್ಣುಗಳ ಅಂಚಲ್ಲಿ ಹನಿಗಳು ಮೂಡಿ ಕೆನ್ನೆಯನ್ನಪ್ಪುತ್ತಿದ್ದವು.