ಮಂಗಳವಾರ, ಅಕ್ಟೋಬರ್ 1, 2013

ಪತ್ರ ಪಲ್ಲವಿ- 1


ಪತ್ರ ಪಲ್ಲವಿ ಸರಣಿಯ ಬಗ್ಗೆ...


ಪ್ರಾಣಕಾಂತ ಮತ್ತವನ ಬಣ್ಣದ ಕುಂಚ

ಗ್ರಂಥಾಲಯದ ಬಾಗಿಲುಗಳನ್ನು ನೋಡಿ ಒಳಗೆ ಹೋಗುವ ಮುನ್ನ ದೇವರ ಹೆಸರನ್ನು ಜಪಿಸುತ್ತಿದ್ದ ಸಂಜೀವನಿಗೆ, ಅದೇ ಗ್ರಂಥಾಲಯದಲ್ಲಿ ತನ್ನದೇ ಅಪೂರ್ವ ಪ್ರೇಮ ಕಥೆಯೊಂದು ಅರಳುತ್ತದೆಯೆಂಬ ಕಲ್ಪನೆಯೇ ಇರಲಿಲ್ಲ. ಎರಡೂವರೆ ವರ್ಷಗಳಿಂದ ಅದೇ ಕಾಲೇಜಿನಲ್ಲಿ ಓದಿ, ಕಮ್ಮಿ ಎಂದರೂ ಇನ್ನೂರು ಬಾರಿ ಇದೇ ಲೈಬ್ರರಿಯಲ್ಲಿ ಗಿರಕಿ ಹೊಡೆದಿದ್ದ ಮೊಂಡ ಹುಡುಗ, ಇಲ್ಲೊಬ್ಬಳು ತನ್ನನ್ನು ಸೆಳೆಯುವ ಸೂಜಿಗಲ್ಲಾಗುತ್ತಾಳೆ ಎಂದು ಎಣಿಸಿರಲಿಲ್ಲ. 

ತನಗನ್ನಿಸಿದ್ದನ್ನು ವ್ಯಕ್ತಪಡಿಸುವ ಕಲೆ ಅವನು ಕರಗತ ಮಾಡಿಕೊಂಡಿರಲಿಲ್ಲ, ಪ್ರಾಯಶಃ ತಾನು ಮಾತನಾಡಿದ್ದೇ ಕಡಿಮೆ. ಹೊಸತಾದ, ಹಳೆಯ, ರಸವತ್ತಾದ, ರಸಹೀನ, ಎಲ್ಲ ರೀತಿಯ ಕಾವ್ಯಾತ್ಮಕ, ವೈಚಾರಿಕ ಹೊತ್ತಿಗೆಗಳನ್ನು ಓದಿಕೊಂಡು, ತನ್ನ ಆಲೋಚನಾಲಹರಿಯನ್ನು ಶ್ರೀಮಂತಗೊಳಿಸಿಕೊಂಡಿದ್ದ. ಆದರೆ ಅಭಿವ್ಯಕ್ತಿಗೆ ಅವಕಾಶಗಳು ವಿರಳವಾಗಿಯೇ ಉಳಿದುಕೊಂಡಿದ್ದವು.

ಈಗ ತನ್ನಲ್ಲಿ ಅಡಗಿ ಕುಳಿತಿದ್ದ ಸಾವಿರಾರು ಮಾತುಗಳನ್ನು, ಅಭಿಪ್ರಾಯಗಳನ್ನು, ಕೆಲವೇ ಪದಗಳ ಒಂದು ಪತ್ರದಲ್ಲಿ ಬಂಧಿಸಿ ಕಿಸೆಯಲ್ಲಿಟ್ಟುಕೊಂಡು, ಸ್ಮಿತಾ ಕುಳಿತಿದ್ದ ಮೇಜಿನೆಡೆಗೆ ಹೆಜ್ಜೆ ಹಾಕತೊದಗಿದ. ಅವಳೆದುರಿಗಿದ್ದ ಖಾಲಿ ಖುರ್ಚಿ ಎಳೆದುಕೊಂಡು, ಅವಳಿಗೆ ಮುಖಗೊಡುವ ಹಾಗೆ ಕುಳಿತುಕೊಂಡ.

ಸ್ಮಿತಾ ತನ್ನ ಪುಸ್ತಕದಿಂದ ತಲೆಯೆತ್ತಿ ಪ್ರಶ್ನಾರ್ಥಕ ದೃಷ್ಟಿ ಬೀರಿದಳು. ಜೇಬಿನಲ್ಲಿದ್ದ ಮಡಿಸಿಟ್ಟ ಹಾಳೆಯನ್ನು ಅವಳೆದುರಿಟ್ಟು "ಹೇಳುವ ಹಂಬಲ ನನ್ನದೇ ಆದರೂ ಓದುವ ಸ್ವಾತಂತ್ರ್ಯ ನಿನ್ನದು. ನಾನು ಆರಿಸಿಕೊಂಡ ಈ ಪುರಾತನವಾದ ಪ್ರೇಮ ಪತ್ರದ ಮಾಧ್ಯಮ ತುಸು ಫಿಲ್ಮಿ ಅನಿಸಿದರೂ, ಅದು ಹತ್ತರಲ್ಲಿ ಹನ್ನೊಂದನೆಯದಾಗುವುದಿಲ್ಲವೆಂದು ಭಾವಿಸಿದ್ದೇನೆ. ಓದಿದ ನಂತರ ನೀನು ನನ್ನನ್ನು ನೇರವಾಗಿ ಭೇಟಿಯಾಗಲು ಬಯಸುತ್ತೇನೆ." ಎಂದ.

ಅವನು ಟಿಪ್ಪಣಿಯನ್ನು ನೀಡುವ ಮುನ್ನವೇ ಸ್ಮಿತಾ ಅವಳ ಉತ್ತರವನ್ನು ನಿರ್ಧರಿಸಿಬಿಟ್ಟಿದ್ದಳೆಂದು ಅವನಿಗೆ ತಿಳಿದೇ ಇರಲಿಲ್ಲ!







ಸ್ಮಿತಾ,


ನಿನ್ನಂತಹ ಅತಿ ಸಾಮಾನ್ಯ ಹುಡುಗಿಯನ್ನು ಪ್ರೇಮಿಸುವ ಇರಾದೆಯೇ ನನಗಿರಲಿಲ್ಲ. ನೀನು ನಮ್ಮ ಕಾಲೇಜಿನ ವಾರ್ಷಿಕಕ್ಕೆ ಬರೆದ ಕವಿತೆಗಳನ್ನು ಮೆಚ್ಚುವ ಇರಾದೆಯೂ ಇರಲಿಲ್ಲ. ಈ ಬಾರಿಯ ಎಲೆಕ್ಷನ್ ನಲ್ಲಿ ಮತ ಹಾಕದಿದ್ದವರನ್ನು ಕುರಿತು ನೀನು ನೀಡಿದ ಭಾಷಣವನ್ನು ಹೊಗಳುವ ಇರಾದೆಯೂ ಇರಲಿಲ್ಲ. ನಿನ್ನ ಬಾಲ್ಯ, ಯೌವ್ವನ, ಪ್ರೇಮ, ಸಾನ್ನಿಧ್ಯಗಳ ಬಗ್ಗೆ ನೀನು ಬರೆದಿದ್ದ ಖಾಸಗಿ ಕವನಗಳನ್ನು ನಿನ್ನ ಆಪ್ತ ಗೆಳತಿಗೆ ಓದಿ ಹೇಳುತ್ತಿದ್ದಾಗ ಅದನ್ನು ಕದ್ದು ಕೇಳುವ ಇರಾದೆಯೂ ಇರಲಿಲ್ಲ.


ಮೂರುವರೆ ತಿಂಗಳಿನಿಂದ ನೀನು ಗ್ರಂಥಾಲಯದಿಂದ ತೆಗೆದುಕೊಂಡ ಪುಸ್ತಕಗಳು ಯಾವುವೆಂದು ನನಗೆ ತಿಳಿದಿದೆ. ನಿನಗೆ ಪ್ರಿಯವಾದ ಲೇಖಕರು, ಚಿತ್ರಗಳು, ಗಾಯಕರು, ನಿರ್ದೇಶಕರು, ಹೀಗೆ ನಿನ್ನ ಅಚ್ಚುಮೆಚ್ಚುಗಳ ಪಟ್ಟಿಯನ್ನೇ ತಿಳಿದಿದ್ದೇನೆ. ನಿನ್ನ ಆಸಕ್ತಿಗಳ ಭಿನ್ನತೆ ನನ್ನನ್ನು ಅತಿಯಾಗಿ ಸೆಳೆದಿದೆ.


ಇತರ ಹುಡುಗರು ನಿನಗೆಂದು ಖರೀದಿಸಿ ನೀಡಿದ ಬಣ್ಣ ಬಣ್ಣದ ದೊಡ್ಡ ಗ್ರೀಟಿಂಗ್ ಕಾರ್ಡ್ ಗಳನ್ನು ನೀನು ನಿರ್ಭಾವದ ಶಾಂತತೆಯಿಂದ ಹರಿದು ಅವರುಗಳ ಕೈಗಿಟ್ಟಿದ್ದನ್ನು ನಾನು ನೋಡಿದ್ದೇನೆ. ಮನೆಯಂಗಳದಲ್ಲಿ ಲಂಗ ದಾವಣಿ ತೊಟ್ಟು ಕಾರ್ತಿಕ ಮಾಸದ ಸಾಲು ದೀಪಗಳನ್ನು ಬೆಳಗಿದ್ದನ್ನು ನಾನು ನೋಡಿದ್ದೇನೆ. ಹಾಗೆಯೇ, ನಿಮ್ಮ ಅತ್ತೆಯ ಮನೆಯ ಹಿತ್ತಲಿನಿಂದ ವೈನಿನ ಬಾಟಲಿಯೊಂದನ್ನು ನೀನು ಕದ್ದು ಸಾಗಿಸಿದ್ದನ್ನೂ ನೋಡಿದ್ದೇನೆ.


ನೀನು ನೂರಾರು ಬಣ್ಣಗಳಲ್ಲಿ ಮಿಂದೆದ್ದ ಕುಂಚ, ಅಚ್ಚರಿಯ ಪರಮಾವಧಿ!

ನಿನ್ನ ಹಾಗೆ ಪ್ರೇಮ ಕವಿತೆಗಳನ್ನು ಬರೆಯಲು ನನಗೆ ತಿಳಿದಿಲ್ಲ. ಆದರೆ ನಿನಗಿಷ್ಟವಾಗುವ ಹಾಗೆ, ಪೌರಾಣಿಕ ಸಿನಿಮಾಗಳ ಥರವೇ ನಿನ್ನನ್ನು 'ಪ್ರಾಣಕಾಂತೆ' ಎಂದು ಕರೆಯಬಲ್ಲೆ!


ನನ್ನ ಭಾವನೆಗಳ ಮೇಲೆ ನಾನು ತಕ್ಕ ಮಟ್ಟಿಗೆ ಹಿಡಿತ ಕಳೆದುಕೊಳ್ಳುತ್ತಿರುವ ಭಾವವನ್ನು ನಾನು ಇಷ್ಟ ಪಡುತ್ತಿರುವುದು ಇದೇ ಮೊದಲು.

ಪ್ರಥಮ ಪತ್ರಕ್ಕೆ ಇಷ್ಟು ಸಾಕು, ಇನ್ನೂ ಮಾತನಾಡುವುದು ಸಾಕಷ್ಟಿದೆ. 

ನಿರೀಕ್ಷೆಗೂ ಮೀರಿದ ತುಡಿತದಲ್ಲಿ,
ಸಂಜೀವ. 


ಮಾರನೆಯ ದಿನ ಅದೇ ಗ್ರಂಥಾಲಯದಲ್ಲಿ ಓದುತ್ತಾ ಕುಳಿತಿದ್ದ ಸಂಜೀವನನ್ನು ಕಂಡು, ಅವನ ಮೇಜಿನ ಎದುರು ಹೆಜ್ಜೆ ಹಾಕುತ್ತಾ ಅವನ ಮುಂದೆ ಇನ್ನೊಂದು ಪತ್ರವನ್ನು ಇಟ್ಟು, ಅವನ ಹೆಗಲನ್ನು ಮೃದುವಾಗಿ ಸ್ಪರ್ಶಿಸಿ, ನಡೆದು ಹೋದಳು ಸ್ಮಿತಾ.


ಪ್ರಾಣಕಾಂತ,

ನಿನ್ನ ಅಕ್ಷರಗಳು ಮುದ್ದಾಗಿವೆ. ನನ್ನ ಖಾಸಗಿ ಜೀವನಕ್ಕೆ ಸಣ್ಣಗೆ ಇಣುಕಿ ನೋಡಿದ ನಿನ್ನ ಮೇಲೆ ನನಗೆ ಕೋಪವೂ ಇದೆ, ಒಲವೂ ಇದೆ.
ಆದರೆ, ನೀನು ನನ್ನನ್ನು ನೋಡಿದ ಹಾಗೆ ನಾನೂ ನಿನ್ನನ್ನು ಕದ್ದು ನೋಡುವ ನನ್ನ ಹಕ್ಕನ್ನು ಪೂರ್ಣವಾಗಿ ಚಲಾಯಿಸುವವರೆಗೂ ನನ್ನ ಉತ್ತರವನ್ನು ಕಾಯ್ದಿರಿಸಿದ್ದೇನೆ.

ಸ್ಮಿತಾ.

ಪತ್ರ ಪಲ್ಲವಿ





ಅನೇಕ ಕಾರಣಗಳಿಗೆ ಮಾತುಗಳು ಸೋತು, ಅಭಿವ್ಯಕ್ತಿಗೆ ಅವಕಾಶಗಳು ಮಾಯವಾಗುವುದುಂಟು. ಸಾಂದರ್ಭಿಕವಾಗಿ, ಪತ್ರಗಳು, ಇ-ಮೇಲ್ ಗಳು, ಡೈರಿ, ಹೀಗೆ, ಬರವಣಿಗೆಯ ಮಾಧ್ಯಮಗಳಿಗೆ ಮೊರೆ ಹೋಗುವುದು ಹೊಸದೇನೂ ಅಲ್ಲ.

ಇಂತಹ ಸಣ್ಣ ಬರಹಗಳನ್ನು ಕಲೆ ಹಾಕಿ, 'ಪತ್ರ ಪಲ್ಲವಿ' ಯಲ್ಲಿ, ಸ್ವತಂತ್ರ ನೀಳ್ಗತೆಗಳಾಗಿ ಪ್ರಸ್ತುತ ಪಡಿಸುವ ಇಚ್ಛೆಯಿಂದ ಈ ಸರಣಿಯನ್ನು ಪ್ರಾರಂಭಿಸುತ್ತಿದೇನೆ. ಸರಣಿ ಒಂದೆರೆಡು ಕತೆಗಳಿಗೇ ಸೀಮಿತವಾಗುತ್ತದೆಯೋ, ನೂರಿನ್ನೂರಕ್ಕೂ ಮುಂದುವರಿಯಬಹುದೋ ನಾನು ಹೇಳಲಾರೆ.

ಪ್ರೇಮ ಎಂಬ ಹಳೆಯ ಸರಕಿನೊಂದಿಗೇ ಶುರುವಿಡುತ್ತಿರುವುದಕ್ಕಾಗಿ  ಕ್ಷಮೆಯಿರಲಿ.

ಪತ್ರ ಪಲ್ಲವಿ- ೧


ಮಂಗಳವಾರ, ಸೆಪ್ಟೆಂಬರ್ 4, 2012

ನೆನಪುಗಳ ಅಂಗಳದಿ


ಪುಸ್ತಕದ ಹರಿದ ಹಾಳೆಗಳನ್ನು ನಾಜೂಕಾಗಿ ಗೋಂದಿನಿಂದ ಅಂಟಿಸಿ ಪುಸ್ತಕಗಳನ್ನು ಮಡಿಸಿಟ್ಟು ಕೂತ ಹರಿಣಿಗೆ ಮತ್ತೆ ಮತ್ತೆ ನೆನಪುಗಳು ಕಾಡಿ ಕೊಲ್ಲುತ್ತಿದ್ದವು. ಅಂಟಿಸಿದ ಪುಸ್ತಕವನ್ನು ಒಲವಿನಿಂದ ಬದಿಗಿಟ್ಟು ಕಿಟಕಿ ತೆರೆದು ತಂಪಾದ ಗಾಳಿಗೆ ಮೊಗವನ್ನು ಒಡ್ಡಿದಳು. ತೆರೆದ ಕಿಟಕಿಯ ಗಾಳಿಗೆ ಪುಸ್ತಕದ ಹಾಳೆಗಳು ತೆರೆದುಕೊಂಡವು. ಜೊತೆಗೆ ಶ್ರೀಕಾಂತನ ನೆನಪುಗಳನ್ನೂ ತೆರೆಯತೊಡಗಿದವು.
ತೆರೆದ ಹಾಳೆಗಳನ್ನೇ ದಿಟ್ಟಿಸಿ ನೋಡಿದ ಹರಿಣಿಯನ್ನು ಅಮೃತಾಳ ಮುಗ್ಧ ಕಂಗಳು ತಿರುಗಿ ದಿಟ್ಟಿಸಿದವು. ಅಂದು ಹರಿಣಿ ಆಸ್ಪತ್ರೆಯಲ್ಲಿ ಕಾಯುತ್ತಾ ತನ್ನದೇ ಭಾವಲೋಕದಲ್ಲಿ ತಲ್ಲೀನಳಾಗಿದ್ದಾಗ ಡಾಕ್ಟರ್ ಸಂತೋಷ್ ಅವರ ಮೂರು ವರ್ಷದ ಕೂಸು ಅಮೃತಾ, ಅವಳ ಕೈಲಿದ್ದ ಪುಸ್ತಕವನ್ನೂ ಕಸಿದುಕೊಂಡು ತುಂಟತನದಿಂದ ಹಾಳೆಗಳನ್ನು ಹರಿದು ಹಾಕಿದ್ದಳು. ಆ ಕಂದನ ಮುಗ್ಧ ಕಂಗಳು, ಸ್ನಿಗ್ಧ ಸೌಂದರ್ಯ ಶ್ರೀಕಾಂತನ ಸರಳತೆಯಂತೆಯೇ ತೋರಿದ್ದವು.

“ಮಿಸ್ಸೆಸ್. ಹರಿಣಿ ಶ್ರೀಕಾಂತ್?” ಎಂದು ನರ್ಸು ಕೂಗಿದ ತಕ್ಷಣ ಎದ್ದು ಒಳಗೆ ಹೋಗಿದ್ದಳು.
“ಏನೂ ತೊಂದರೆಯಿಲ್ಲ ಹರಿಣಿ. ತುಂಬಾ ಆರೋಗ್ಯವಾಗಿದ್ದೀ. ನೀನು ನಿನ್ನ ಕಾಳಜಿ ಹೆಚ್ಚು ತೊಗೋಬೇಕು.ಆಗಲೇ ನಿನ್ನ ಕೂಸಿಗೂ ಆರೋಗ್ಯ. ಡೆಲಿವರಿ ಆಗೋವರೆಗೂ ಪೌಷ್ಠಿಕ ಆಹಾರ ಸತತವಾಗಿ ತೊಗೋಬೇಕು. ನಂತರದ ಪಥ್ಯ ನಿನಗೆ ಸಮಯ ಬಂದಾಗ ಹೇಳ್ತೇನೆ. ಯಾವುದೇ ದುಃಖ ಟೆನ್ಶನ್ ಗಳನ್ನ ಮನಸ್ಸಿಗೆ ಹಚ್ಚಿಕೊಳ್ಳಬಾರದು. ನಿನ್ನ ಮಾನಸಿಕ ಸ್ಥಿಮಿತ, ಪ್ರಫುಲ್ಲತೆ ಈಗ ಬಹಳ ಮುಖ್ಯ. ಯಾವಾಗ ಕಸಿವಿಸಿ ಅನ್ನಿಸಿದರೂ ನನಗೆ ತಕ್ಷಣ ಫೋನ್ ಮಾಡು. ಆಯ್ತಾ?” ಅಂತ ಡಾಕ್ಟರ್. ಸ್ಮಿತಾ ಹೇಳಿದ್ದರು. ನಂತರ ತಲೆಯಾಡಿಸಿ ಎದ್ದು ನಿಲ್ಲುತ್ತಿದ್ದ ಹರಿಣಿಯನ್ನು ಮತ್ತೆ ಕೈಹಿಡಿದು, “ಬಿ ಬ್ರೇವ್ ಹರಿಣಿ. ನಾವೆಲ್ಲಾ ನಿನ್ನ ಜೊತೆಗಿದ್ದೇವೆ.” ಎಂದು ಧೈರ್ಯ ಹೇಳಿದ್ದರು. 
ಆಸ್ಪತ್ರೆಯ ಕಾರಿಡಾರಲ್ಲಿ ನಡೆದು ಬರುತ್ತಿದ್ದ ಹರಿಣಿಗೆ ಅಷ್ಟು ಪರಿಚಿತವಿದ್ದ ಗೋಡೆ ಕಿಟಕಿಗಳು, ನಡೆಯುತ್ತಿದ್ದ ನೆಲ, ಸುತ್ತಲಿನ ಪರಿಸರ, ಗಾಳಿಯೂ ಅಂದೇಕೋ ಹಠಾತ್ತನೆ ಬೇರೆಯೇ ಲೋಕದಷ್ಟು ಅಪರಿಚಿತವಾಗಿ ಕಂಡವು. ಶ್ರೀಕಾಂತನ ಕೊಠಡಿಯ ಬಾಗಿಲಿಗೆ ಬೀಗ ಬಿದ್ದಾಗಿತ್ತು. ಅಲ್ಲೇ ನಡೆಯುತ್ತಿದ್ದ ನರ್ಸ್ ಒಬ್ಬಳನ್ನು ಕರೆದು, “ ಡಾಕ್ಟರ್. ಶ್ರೀಕಾಂತ್ ಅವರ ಕೊಠಡಿಯನ್ನು ತೆರೆದು ಕೊಡಲು ಸಾಧ್ಯವಾ? ಕೆಲವು ವಸ್ತುಗಳು ಉಳಿದುಹೋಗಿವೆ.” ಎಂದು ಕೇಳಿದ್ದಳು. “ಅಗತ್ಯವಾಗಿ, ಕೂತ್ಕೊಳ್ಳಿ ಹರಿಣಿ ಮೇಡಂ. ಪರ್ಮಿಷನ್ ಕೇಳಿ ಚಾಬಿ ತರಿಸಿ ಕೊಡ್ತೀನಿ.” ಎಂದು ಹೇಳಿ ರೂಮನ್ನು ತೆರೆಸಿದ್ದಳು. ಒಳಗೆ ಕಾಲಿಡುತ್ತಿದ್ದಂತೆಯೇ ಶ್ರೀಕಾಂತನ ದನಿಯ ಪುನರುಚ್ಛಾರ....
“ನಮಸ್ಕಾರ, ಕೂತ್ಕೊಳಿ. ಏನಾಯಿತು?” ಶ್ರೀಕಾಂತ ಕೇಳಿದ.
“ಸ್ಟೂಲು ಹಾಕಿಕೊಂಡು ಅಟ್ಟದ ಮೇಲಿಂದ ಸಾಮಾನು ಇಳಿಸೋದಕ್ಕೆ ಹೋಗಿ ಕಾಲು ಜಾರಿ ಬಿದ್ದುಬಿಟ್ಟಳು.” ಹರಿಣಿಯ ತಂದೆ ಹೇಳಿದರು.
“ಎಲ್ಲಿ ನೋಡುವ” ಶ್ರೀಕಾಂತ ಮೆಲ್ಲಗೆ ಹರಿಣಿಯ ಪಾದವನ್ನು ಹಿಡಿದು ಪರೀಕ್ಷಿಸಿದ.
“ಏನೂ ಆಗಿಲ್ಲ. ಸಣ್ಣ ಉಳುಕು ಅಷ್ಟೇ. ಊತ ಹೆಚ್ಚಿರೋದ್ರಿಂದ ಸ್ವಲ್ಪ ಸಮಯ ಬೇಕಾಗಬಹುದು. ನೋವು ಕಡಿಮೆಯಾಗಲಿಕ್ಕೆ ಮಾತ್ರೆ ಬರೆದಿದ್ದೇನೆ. ಈ ತೈಲದಿಂದ ಪ್ರತಿದಿನ ಬೆಳಿಗ್ಗೆ, ಸಂಜೆ ಮಸಾಜ್ ಮಾಡಬೇಕು. ಎಷ್ಟು ವಿಶ್ರಾಂತಿ ಕೊಡ್ತೀರೋ ಅಷ್ಟು ಬೇಗ ಗುಣವಾಗುತ್ತೆ”

ಶ್ರೀಕಾಂತನನ್ನು ಮೊದಲು ನೋಡಿದ್ದು ಇಲ್ಲಿಯೇ. ಒಂದೇ ಬಾರಿ ನೋಡಿದ್ದರೂ ಮರೆಯಲಾಗದ ಮುಖ. ಸ್ಫುರದ್ರೂಪಿ. ಒಂದೂವರೆ ತಿಂಗಳ ನಂತರ ಹರಿಣಿ, ಮತ್ತೆ ತಂದೆಯೊಡನೆ ಶ್ರೀಕಾಂತನನ್ನು ಭೇಟಿಯಾಗಿದ್ದಳು. ಅವಳಿಗೆ ಸಂಪೂರ್ಣ ಗುಣವಾಗಿತ್ತು, ಈ ಬಾರಿ ಅವಳ ತಂದೆಗೆ ಒಂದು ವಾರದಿಂದ ಮಂಡಿ ನೋವು ಬಾಧಿಸತೊಡಗಿತ್ತು. ಅವಳ ತಂದೆಗೆ ಔಷಧಿ ಕೊಡಿಸಿ ಕೊಠಡಿಯಿಂದಾಚೆ ಬರುತ್ತಿರುವಾಗಲೇ, ಹರಿಣಿಯ ತಂದೆಗೆ ತಮ್ಮ ಹಳೆಯ ಗೆಳೆಯರೊಬ್ಬರ ಭೇಟಿಯಾಯಿತು. ಭೇಟಿಯಾದವರ ಹೆಸರು ಗೋಪಾಲರಾಯರೆಂದು, ಅವರು ಕಾಲೇಜಿನಲ್ಲಿ ಅವಳ ತಂದೆಯ ಸಹಪಾಠಿ ಎಂದು, ಮತ್ತು ಶ್ರೀಕಾಂತನ ಸೋದರ ಮಾವನೆಂದು ಹರಿಣಿಗೆ ತಿಳಿಯಿತು. ಹೀಗೆ ಪ್ರಾರಂಭವಾದ ಹಳೆಯ ಗೆಳೆತನದ ದ್ವಿತೀಯಾರ್ಧ ಆಗಾಗ ಮನೆಗೆ ಬಂದು ಹೋಗುವ ಆತ್ಮೀಯ, ಕೌಟುಂಬಿಕ ಸ್ನೇಹವಾಗಿ ಬೆಳೆದಿತ್ತು. ಎರಡೂ ಕುಟುಂಬದ ಹಿರಿಯರೂ ಶ್ರೀಕಾಂತ ಮತ್ತು ಹರಿಣಿಯ ಮದುವೆಯ ಪ್ರಸ್ತಾಪ ಆಗಲೇ ಮಾಡಿದ್ದರು. ವಿಷಯ ಇಬ್ಬರ ಮುಂದೆ ಇಟ್ಟಾಗ, “ಸಮಯ ಬೇಕು”, “ಯೋಚಿಸಬೇಕು” ಎಂದು ಸುಳ್ಳೇ ಸಬೂಬುಗಳನ್ನು ಹೇಳಿಕೊಳ್ಳುವುದರಲ್ಲಿಯೇ ಸಾಕಷ್ಟು ಸಮಯ ಕದ್ದು ಆಸ್ವಾದಿಸಿದ್ದುಂಟು.

ನಿಶ್ಚಿತಾರ್ಥದ ನಂತರ ಇಬ್ಬರೇ ಭೇಟಿಯಾದಾಗ ಶ್ರೀಕಾಂತ ತನ್ನ ವೃತ್ತಿಯ ಬಗ್ಗೆ ಅವಳೊಂದಿಗೆ ಮಾತನಾಡಿದ್ದ. ವೈದ್ಯನಾಗಿ ಅಭ್ಯಸಿಸುತ್ತಿದ್ದರೂ ಮುಂದೆ ಓದುವ ಇರಾದೆ, ಕುಟುಂಬಕ್ಕೆ ಸಮಯ ಕೊಡಲು ಸಾಧ್ಯವಾಗದ ಕೆಲವು ಅನಿವಾರ್ಯತೆಗಳು, ಆ ಅನಿವಾರ್ಯತೆಗಳನ್ನು ಅವಳು ಸ್ವೀಕರಿಸಬೇಕಾದ ರೀತಿ, ಅವಳಿಂದ ಅವನು ನಿರೀಕ್ಷಿರುವ ಬೆಂಬಲ, ಎಲ್ಲದರ ಬಗ್ಗೆಯೂ ಅವನು ಮನಬಿಚ್ಚಿ ಹೇಳಿಕೊಂಡಿದ್ದ. ಅವನ ಆ ಪ್ರಾಮಾಣಿಕತೆ, ಅವಳಿಗೆ ಕೊಟ್ಟ ಪ್ರಾಮುಖ್ಯತೆ, ಅವಳೊಂದಿಗೆ ಇದ್ದಾಗ ಅವನು ನೀಡುತ್ತಿದ್ದ ಕಂಫರ್ಟ್ , ಎಲ್ಲವೂ ಅವನ ಮೇಲೆ ಅವಳಿಗಿದ್ದ ವಿಶ್ವಾಸವನ್ನು ಒಲವನ್ನೂ ಹೆಚ್ಚಿಸುತ್ತಿದ್ದವು. ಅವರಿಬ್ಬರ ಮಧ್ಯೆ ದಿನವಿಡೀ ಮಾತನಾಡುವ ಹುಚ್ಚು ಕಾತರವಿರಲಿಲ್ಲ, ಒಬ್ಬರ ಸಮಯವನ್ನು ಇನ್ನೊಬ್ಬರು ಕಿತ್ತುಕೊಳ್ಳುವ ಪೋಸೆಸಿವ್ನೆಸ್ಸ್ ಇರಲಿಲ್ಲ, ಹಗಲೆಲ್ಲಾ ಊರು ಸುತ್ತುವ ಶೋಕಿಯಿರಲಿಲ್ಲ, ಅಪರೂಪದ ಭೇಟಿಗಳಲ್ಲಿ ತಮ್ಮ ಪ್ರೇಮವನ್ನು ದೈಹಿಕವಾಗಿ ಪ್ರದರ್ಶನಕ್ಕಿಡುವ ಚೆಲ್ಲಾಟವಿರಲಿಲ್ಲ, ಗಂಟೆಗಟ್ಟಲೆ ಮಾತನಾಡುವ ಫೋನ್ ಕಾಲ್ ಗಳಿರಲಿಲ್ಲ, ವೈಭವೀಕರಣವಿರಲಿಲ್ಲ . ಇಬ್ಬರ ನಡುವೆ ನೇರ ನುಡಿಗಳಿದ್ದವು, ಮೌನಗಳಿದ್ದವು, ಸೌಜನ್ಯವಿತ್ತು, ಸಹಜತೆಯಿತ್ತು, ಮಾತುಗಳಲ್ಲಿ ಚೈತನ್ಯವಿತ್ತು, ಆಲಿಸುವ ವ್ಯವಧಾನವಿತ್ತು, ಕಾಯುವ ಸಹನೆಯಿತ್ತು, ಅರ್ಥೈಸಿಕೊಳ್ಳುವ ನಲುಮೆಯಿತ್ತು, ಪ್ರಾಮಾಣಿಕತೆಯಿತ್ತು. ಶ್ರೀಕಾಂತ ಹರಿಣಿಯ ಪ್ರೌಢತೆಗೆ, ಮುಕ್ತತೆಗೆ, ಚೆಲುವಿಗೆ, ಮಾತುಗಳಿಗೆ ಮಾರುಹೋಗಿದ್ದ. ಅವಳಲ್ಲಿದ್ದ ಸಿಂಪ್ಲಿಸಿಟಿ  ಅವನನ್ನು ಇನ್ನಿಲ್ಲದಂತೆ ಸೆಳೆದಿತ್ತು.


ಶ್ರೀಕಾಂತನಲ್ಲಿದ್ದ ವೈಚಾರಿಕತೆಯನ್ನು ಹರಿಣಿ ಮೆಚ್ಚಿಕೊಂಡಿದ್ದಳು. ಅವನು ಆಕರ್ಷಕ ಮಾತುಗಾರನಲ್ಲ. ಆದರೆ ಅವನಲ್ಲಿ ವಿಚಾರಗಳ ಮತ್ತು  ಆದರ್ಶಗಳ ಶ್ರೀಮಂತಿಕೆಯಿತ್ತು. ಎಲ್ಲರ ಜೊತೆ ಎಷ್ಟು ಸೌಮ್ಯವಾಗಿ ಬೆರೆತು ಮಾತನಾಡುತ್ತಿದ್ದನೋ, ಅಗತ್ಯ ಬಿದ್ದಾಗ ಅಷ್ಟೇ ಕಟುವಾಗಿ ಕಡ್ಡಿ ತುಂಡು ಮಾಡಿದ ಹಾಗೆ ಮಾತನಾಡುವ ಜಾಣ್ಮೆ ಅವನಲ್ಲಿ ಇತ್ತು. ಶ್ರೀಕಾಂತ ಪ್ರಚಂಡ ಬುದ್ಧಿವಂತನೆಂದು ಹರಿಣಿ ಆಗಾಗ ಹೊಗಳುತ್ತಿದ್ದಳು. ಕೆಲವೊಮ್ಮೆ ಆ ಪ್ರಶಂಸೆಯನ್ನು ಅವಳ ಬಾಯಿಂದ ಕೇಳುವುದಕ್ಕಾಗಿಯೇ, ಹೊಸ ವಿಚಾರಗಳನ್ನೂ ಅವಳೊಂದಿಗೆ ಹಂಚಿಕೊಳ್ಳುತ್ತಿದ್ದ ಶ್ರೀಕಾಂತ. ಅವನನ್ನು ಬಣ್ಣಿಸುವುದರಲ್ಲಿ ಅವಳೂ ಸುಖಿಸುತ್ತಿದ್ದಳು. ಅವನು ಅವಳಿಗಾಗಿ ಕೆಂಪು ಗುಲಾಬಿಯ ಗುಚ್ಛಗಳನ್ನಾಗಲಿ, ಮೃದು ಬೊಂಬೆಗಳನ್ನಾಗಲಿ, ಬಟ್ಟೆಗಳನ್ನಾಗಲಿ ಖರೀದಿಸಿ ನೀಡುತ್ತಿರಲಿಲ್ಲ, ಅವಳೂ ಅದನ್ನು ನಿರೀಕ್ಷಿಸುತ್ತಿರಲಿಲ್ಲ. ಸಣ್ಣ ಉಡುಗೊರೆಗಳಲ್ಲಿ, ಸಂಕ್ಷಿಪ್ತ ಭೇಟಿಗಳಲ್ಲಿ ಅವರ ಸಂಭ್ರಮವಿತ್ತು. ಸಂಭ್ರಮ ಮನೆಯೆಲ್ಲ ಹರಡುವ ಕಾಲ ಕೂಡಿ ಬರಲು ತಡವಾಗಲಿಲ್ಲ. ಸಂತಸದಿಂದ ಇಬ್ಬರೂ ಸುಖಗಳನ್ನೂ, ದುಃಖಗಳನ್ನೂ ಹಂಚಿಕೊಳ್ಳುವ ಭಾಷೆಯಿತ್ತರು.

ಮದುವೆಯ ನಂತರ ಶ್ರೀಕಾಂತ್ ಹರಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ತನ್ನ ಸಹೋದ್ಯೋಗಿಗಳಿಗೆ ಪರಿಚಯ ಮಾಡಿಕೊಟ್ಟಿದ್ದ. ಆಸ್ಪತ್ರೆಯ ಕೆಲಸಗಳ ನಡುವೆ ಊಟ ತಂದುಕೊಡುತ್ತಿದ್ದ ಹರಿಣಿಗೆ ಕಾಯುತ್ತಿರುತ್ತಿದ್ದ. ಅಂದೊಂದು ದಿನ ಅವಳು ಬರುತ್ತಿದ್ದಂತೆಯೇ ಮೊದಲ ಗುಲಾಬಿಯನ್ನು ಕೈಗಿಟ್ಟು, ಅಚ್ಚರಿಯಲ್ಲಿ ಅಪ್ಪಿಕೊಂಡಿದ್ದ. ಎರೆಡು ವರ್ಷ ಸಿಹಿ ಕಹಿಗಳೊಂದಿಗೆ ಮದುವೆಯ ಸುಮಧುರ ಬಂಧನದಲ್ಲಿದ್ದ ಅವರಿಬ್ಬರಿಗೆ ಹೊಸ ಅತಿಥಿ ಬರುವ ಸಿಹಿ ಸುದ್ದಿ ಸಾರ್ಥಕತೆಯ ಖುಷಿಯನ್ನು ತಂದಿತ್ತು. ಅವಳಂತೆಯೇ ಹೊಳೆವ ಕಂಗಳ ಕಂದ ಪುಟ್ಟ ಕೈ ಕಾಲುಗಳನ್ನು ಆಡಿಸಿ ಎತ್ತಿಕೊಂಡಾಗ ಅವನ ಹೆಗಲ ಮೇಲೆ ತಲೆಯಿರಿಸಿ ಮಲಗುವ ಭವಿಷ್ಯತ್ಕಾಲದ ಕಲ್ಪನೆಯೇ ಅವನಲ್ಲಿ  ಬೆಚ್ಚನೆಯ ನವೀನ ಸಂಚಲನ ಉಂಟು ಮಾಡುತ್ತಿತ್ತು. ಇಬ್ಬರೂ ಒಟ್ಟಿಗೆ ಕೂತು ಬರಲಿರುವ ಪುಟ್ಟ ಚಿನಕುರುಳಿಗೆ ಹೆಸರುಗಳನ್ನು ಬರೆದಿಡುತ್ತಿದ್ದರು. ಐದು ತಿಂಗಳ ಹೊಸ್ತಿಲಲ್ಲಿದ್ದ ಹರಿಣಿಯ ಹೊಟ್ಟೆಯ ಮೇಲೆ ಕಿವಿಯಿಟ್ಟು ಶ್ರೀಕಾಂತ್, ಹೃದಯ ಬಡಿತ ಕೇಳುವ ಹೊಸ ಪಿತೃತ್ವದ ಅನುಭವ ಪಡೆದುಕೊಳ್ಳುತ್ತಿದ್ದ. ಕುಡಿಯೊಡೆಯುತ್ತಿದ್ದ ಹೊಸ ಜೀವದ ಹೊಸ ಹುರುಪು ಮನೆಯಲ್ಲಿ ತುಳುಕಾಡುತ್ತಿತ್ತು. ಕೆಲಸದ ವೇಳೆಯಲ್ಲೂ ಶ್ರೀಕಾಂತ್ ಸಂಭ್ರಮವನ್ನು ನೆನೆ ನೆನೆದು ಪುಟಿದೇಳುತ್ತಿದ್ದ.   

ಅವನ ಕೊಠಡಿಯ ದೊಡ್ಡ ಕಿಟಕಿಯಿಂದ ಎದುರಿನ ಜನನಿಬಿಡ ರಸ್ತೆಯ ಉದ್ದಗಲವೂ ಕಾಣುತ್ತಿತ್ತು. ಶ್ರೀಕಾಂತ್, ತನ್ನ ಗಡಿಬಿಡಿಯ ದಿನಚರಿಯಲ್ಲಿ ಕೆಲ ಕ್ಷಣಗಳ ಬಿಡುವು ಸಿಕ್ಕಿದರೂ  ಸಾಕು, ಆ ರಸ್ತೆಯನ್ನು ನೋಡುತ್ತಿದ್ದ. ಕಿಟಕಿಯಿಂದ ಬರುವ ತಂಗಾಳಿಯನ್ನು ಆಸ್ವಾದಿಸುತ್ತಿದ್ದ.
ಅದೇ ಕಿಟಕಿಯ ಕಡೆ ಮುಖ ಮಾಡಿ ನೆನಪುಗಳನ್ನು ಮೆಲುಕುಹಾಕುತ್ತಿದ್ದಳು ಹರಿಣಿ, ಅದೇ ಮೇಜು, ಅದೇ ಕುರ್ಚಿಗಳು, ಅದೇ ಬಾಗಿಲ ಮರೆ. ತೆರೆದ ಕಿಟಕಿಗಳು, ಶ್ರೀಕಾಂತನ ತೆರೆದ ಮನಸ್ಸು, ತೆರೆದ ತೋಳುಗಳನ್ನು ನೆನೆಪಿಸಿದವು. ಕಿಟಕಿಯಾಚೆ ದೃಷ್ಟಿ ಹರಿಸಿದರೆ ಮತ್ತೆ ಅವನದ್ದೇ ದನಿ, “ನಿನಗೆ ಅಲ್ಲಿಂದಲೇ ಗುಲಾಬಿ ಹೂ ತಂದಿದ್ದು” , “ಅಲ್ಲೊಂದು ಹೊಸ ಫುಡ್ ಪಾಯಿಂಟ್ ತೆರೆದಿದೆ. ಈ ಸಂಜೆ ನಿನಗೆ ಅಲ್ಲೇ ಟ್ರೀಟ್”... ಪಕ್ಕದಲ್ಲೇ ನಿಂತು ರಸ್ತೆಯೆಡೆಗೆ ಬೆಟ್ಟು ಮಾಡಿ ಮಾತಾಡುತ್ತಿದ್ದ ಶ್ರೀಕಾಂತ ಇದ್ದಕ್ಕಿದ್ದಂತೆಯೇ ಮಾಯವಾಗಿದ್ದ.

ಕೊಠಡಿ ತೆರೆಸಿ ಕೊಟ್ಟಿದ್ದ ನರ್ಸು ಮತ್ತೆ ಬಂದು “ಮೇಡಂ, ನೀವು ಬಂದು ಆಗಲೇ ಅರ್ಧ ಘಂಟೆ ಆಗುತ್ತಾ ಬಂತು. ಏನು ಬೇಕಿತ್ತು? ಸಿಕ್ಕಿತೇ? ನಾನು ಹುಡುಕಲಿಕ್ಕೆ ಸಹಾಯ ಮಾಡಲೇ?” ಎಂದಿದ್ದಳು.
“ಸಾರಿ ಸಿಸ್ಟರ್, ಅದು ಸಿಗುತ್ತಿಲ್ಲ. ನಾನು ಹೊರಡುತ್ತೇನೆ. ತುಂಬಾ ಥ್ಯಾಂಕ್ಸ್” ಎಂದು ಹೇಳಿ ಹೊರಟಿದ್ದಳು.
ಕೊಠಡಿಯಿಂದ ಹೊರಬಂದು ಮೆಟ್ಟಿಲುಗಳನ್ನಿಳಿದು ಬಂದಳು. ಎಮೆರ್ಜೆನ್ಸಿ ಕ್ಯಾಶುಯಲಿಟಿ ಕಣ್ಣಿಗೆ ಬಿತ್ತು..
ಮತ್ತೆ ನೆನಪುಗಳ ಹಾವಳಿ...
“ಆಕ್ಸಿಡೆಂಟ್ ನಲ್ಲಿ ಶ್ರೀಕಾಂತ್ ಅವರಿಗೆ ಹೊಡೆದ ಕಾರಿನಿಂದ ಅವರ ರಿಬ್ ಕೇಜ್ ಗೆ ಹೊಡೆತ ಬಿದ್ದಿದೆ. ಅದು ಚೂರಾಗಿ, ಹೃದಯಕ್ಕೆ ಘಾಸಿಯಾಗಿದೆ. ಅಷ್ಟಲ್ಲದೇ ಗಾಯಗಳಿಂದ ಸಾಕಷ್ಟು ರಕ್ತ ಹೋಗಿದೆ. ಹೃದಯ ಬಹಳ ಕುಂಠಿತವಾಗಿದೆ. ಏನೂ ಹೇಳೋಕಾಗಲ್ಲ. ಹರಿಣಿ, ವಿ ವಿಲ್ ಟ್ರೈ ಅವರ್ ಬೆಸ್ಟ್.” ಡಾಕ್ಟರ್ ಸಂತೋಷ್ ಹೇಳಿದ್ದರು.
ನಾಲ್ಕು ಘಂಟೆಗಳು ಹೊರಗೆ ನಿಂತು ಕಾದ ಸಮಯ ಹರಿಣಿಯ ಜೀವನದ ಅತಿ ದೊಡ್ಡ ನಾಲ್ಕು ಘಂಟೆ. ಚಡಪಡಿಕೆಗೆ ಹೃದಯ ಸುತ್ತಲಿದ್ದ ಇಪ್ಪತ್ತು ಮಂದಿಗೆ ಕೇಳುವ ಹಾಗೆ ಬಡಿದುಕೊಳ್ಳುತ್ತಿದ್ದ ಹಾಗೆ ಹರಿಣಿಗೆ ಭಾಸವಾಗಿತ್ತು. ತನ್ನೊಳಗೆ ಮಿಡಿಯುತ್ತಿದ್ದ ಆ ಪುಟ್ಟ ಜೀವದ ಹೃದಯ ಅವಳಲ್ಲಿ ಇನ್ನೂ ಭಯ ಹುಟ್ಟಿಸಿತ್ತು. ನಾಲ್ಕು ಘಂಟೆಗಳ ಸತತ ಪ್ರಯತ್ನದ ನಂತರವೂ ಸಂತೋಷ್ ಕೊಟ್ಟ ಉತ್ತರ, “ಸಾರಿ ಹರಿಣಿ, ನಾವು ಶಕ್ತಿ ಮೀರಿ ಪ್ರಯತ್ನ ಪಟ್ಟೆವು. ಆದರೂ ಶ್ರೀಕಾಂತನನ್ನು ನ್ನ ಉಳಿಸೋಕೆ ಆಗ್ಲಿಲ್ಲ. ಐ ಆಮ್ ರಿಯಲಿ ಸಾರಿ”
ಅವೇ ಪದಗಳು ಹರಿಣಿಯ ಕಿವಿಯಲ್ಲಿ ಪ್ರತಿಧ್ವನಿಸತೊಡಗಿದವು... ಶ್ರೀಕಾಂತನನ್ನ ಉಳಿಸೋಕೆ ಆಗ್ಲಿಲ್ಲ...
ಮತ್ತೆ ಕಂಬನಿಗಳನ್ನು ಮಿಡಿದು ಆಸ್ಪತ್ರೆಯಿಂದ ಹೊರನಡೆದಿದ್ದಳು. ರಸ್ತೆಯಲ್ಲಿ ನಡೆದು ಬರುವಾಗಲೂ ಶ್ರೀಕಾಂತನ ಜೊತೆಗೆ ಸಿನಿಮ ನೋಡಿದ ಥಿಯೇಟರು, ಅವನ ಜೊತೆ ಖುಷಿಯಲ್ಲಿ ಸುತ್ತಿದ ಫೂಟ್ಪಾಥ್ಗಳು, ಅವನೊಂದಿಗೆ ಪಾನಿಪುರಿ ತಿಂದ ಗಾಡಿಗಳು, ಅವಳ ಹುಟ್ಟುಹಬ್ಬಕ್ಕೆ ಅವಳಿಗೆ ಇಷ್ಟವಾದ ಕೇಕ್ ತಂದ ಬೇಕರಿ, ಅವರ ಮದುವೆಯ ಉಂಗುರಗಳನ್ನು ಕೊಂಡ ಚಿನ್ನದ ಅಂಗಡಿ, ಅವರ ಮೊದಲ ಖಾಸಗಿ ಭೇಟಿಗೆ ಸಾಕ್ಷಿಯಾದ ಪಾರ್ಕು, ರಾಶಿ ರಾಶಿ ಪುಸ್ತಕಗಳನ್ನೂ, ಸಿ ಡಿ ಗಳನ್ನು ಕೊಂಡ ಅಂಗಡಿಗಳು, ಯಾವಾಗಲೂ ಕಾರು ನಿಲ್ಲಿಸುತ್ತಿದ್ದ ನಿಲುಗಡೆ, ಎಲ್ಲವೂ ಶ್ರೀಕಾಂತನ ನೆನಪು ಮೂಡಿಸುತ್ತಿದ್ದವು.
ಕಣ್ಣಿಗೆ ಬಿದ್ದ ಪ್ರತಿಯೊಂದು ದೃಶ್ಯ, ಕಿವಿಗೆ ಬಿದ್ದ ಪ್ರತಿಯೊಂದು ಶಬ್ದ, ವಾಸ್ತವವನ್ನು ನಿರಾಕರಿಸಿ ಶ್ರೀಕಾಂತನ ಇರುವಿಕೆಯನ್ನು ಹೆಜ್ಜೆ ಹೆಜ್ಜೆಗೂ ನಿರೂಪಿಸುವ ಹಠಕ್ಕೆ ಬಿದ್ದ ಹಾಗಿದ್ದವು. ತನ್ನೊಳಗಿದ್ದ ಅವನ ಜೀವವೂ ಸಹ.

ರಸ್ತೆಯುದ್ದಕ್ಕೂ ಯಾಂತ್ರಿಕವಾಗಿ ಹೆಜ್ಜೆ ಹಾಕುತ್ತ ಮನೆ ಸೇರಿದ್ದಳು. ಬಾಗಿಲು ತೆರೆದು ದೀಪಗಳನ್ನು ಹಚ್ಚಿ ಸುತ್ತ ನೋಡಿದಳು. ಎಲ್ಲವೂ ಖಾಲಿ ಖಾಲಿ. ಮನೆಯೂ, ಮನಸ್ಸೂ! ಮನೆಯ ಪ್ರತಿಯೊಂದು ವಸ್ತುವೂ ಅವನ ನಿಸ್ವಾರ್ಥ ಒಲವನ್ನು ಬಿಂಬಿಸುತ್ತಿದ್ದವು. ಅವನು ನಗಿಸಿದ, ಅಳಿಸಿದ, ಅಪ್ಪಿಕೊಂಡ, ಮುತ್ತಿಟ್ಟ, ಛೇಡಿಸಿದ, ಜಗಳವಾಡಿದ, ಒಲಿಸಿಕೊಂಡ, ಪ್ರೇಮಿಸಿದ ಘಳಿಗೆಗಳನ್ನು ನೆನಪಿಗೆ ತರುವ ಪಣ ತೊಟ್ಟು ನಿಂತಿದ್ದವು.
ನಿಂತಲ್ಲೇ ಕುಸಿದು, ಸಣ್ಣ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳತೊಡಗಿದ್ದಳು. ಧ್ವನಿಯು ಅಸಹನೀಯ ಖಾಲಿತನದ ಕಡಲಿನಲ್ಲಿ ಮುಳುಗಿ ಹೋಗಿತ್ತು. ಮನಸ್ಪೂರ್ತಿಯಾಗಿ ಅತ್ತು ಶೂನ್ಯ ದೃಷ್ಟಿಯಲ್ಲಿ ದೀರ್ಘಕಾಲ ಕೂತಲ್ಲಿಯೇ ಕುಳಿತಿದ್ದಳು. ಕಣ್ಮುಚ್ಚಿ ತೆರೆದು, ಮೇಜಿನ ಮೇಲಿದ್ದ ಹರಿದ ಪುಸ್ತಕದ ಕಡೆ ಕಣ್ಣು ಹಾಯಿಸಿದ್ದಳು. ಗಾಳಿಗೆ ತೆರೆದ ಪುಟಗಳು ವರ್ತಮಾನದ ಗೋಡೆಗಳನ್ನು ಮೀರಿ ಶ್ರೀಕಾಂತನ ನೆನಪುಗಳನ್ನು ಬೆನ್ನತ್ತಿದ್ದವು.
ಏನು ಮಾಡಲೂ ಉತ್ಸಾಹವಿಲ್ಲದೆ ಮಂಚದ ಮೇಲೆ ಕೂತು ಅವರಿಬ್ಬರ ಭಾವಚಿತ್ರವೊಂದನ್ನು ದಿಟ್ಟಿಸತೊಡಗಿದಳು. ತನ್ನ ಹೊಟ್ಟೆಯನ್ನು ಸ್ಪರ್ಶಿಸಿದಳು. ಅಲ್ಲಿ ಅವನೇ ಇದ್ದನು. ಅವನ ಕೊನೆಯ ಜೀವಂತಿಕೆಯಿತ್ತು. ದುಃಖದ ಸಣ್ಣ ನಗೆಯೊಂದನ್ನು ನಕ್ಕು, ರೇಡಿಯೋ ಹಾಕಿ ದಿಂಬಿನ ಮೇಲೆ ತಲೆ ಇಟ್ಟಳು.
“ನೆನಪುಗಳಾ ಅಂಗಳದಿ... ನಿನ್ನ ನಗೆಯ ತುಂಬಿಕೊಂಡ ಬೆಳದಿಂಗಳು...”  ಹಾಡು ಸಣ್ಣಗೆ ತೇಲಿ ಬರುತ್ತಿತ್ತು. 
ನಿದ್ರಿಸುವ ಯತ್ನದಲ್ಲಿ ಮುಚ್ಚಿದ ಕಣ್ಣುಗಳ ಅಂಚಲ್ಲಿ ಹನಿಗಳು ಮೂಡಿ ಕೆನ್ನೆಯನ್ನಪ್ಪುತ್ತಿದ್ದವು. 

ಭಾನುವಾರ, ಮಾರ್ಚ್ 25, 2012

ಹಾರಿ ಹೋಗುವ ಮುನ್ನ

ಸಾಧನೆಯ ಕನಸುಗಳ 
ಹುಡುಕಿ ಹೊರಟಿರುವೆ ನೀನು,
ನಿನ್ನಲ್ಲಿ ನನ್ನನ್ನು 
ಹುಡುಕ ಹೊರಟಿರುವೆ ನಾನು,
ಜಗದ ದುಶ್ಚಟಗಳಿಗೆ ಸಜ್ಜಾಗಿ 
ಸಾಧನೆಯ ಹಾದಿ ಸವೆಸಲು 
ಪತ್ರ, ಸಂದೇಶಗಳಿಗೂ ನಿಲುಕದಷ್ಟು ದೂರ 
ಹಾರಿ ಹೋಗುವ ಮುನ್ನ 
ಸಣ್ಣದೊಂದು ಭಾಷೆಯ ನೀಡಿ ಹೋಗು...
ನಾ ಕರೆದಾಗ, 
ನೀ ಮರಳಿ ಬರುವೆಯೆಂದು!



ಬುಧವಾರ, ಫೆಬ್ರವರಿ 22, 2012

ಕವನ - ನಯನ









ಕಣ್ಮುಚ್ಚಿ ಕಣ್ತೆರೆಯೆ ಹೀಗೊಂದು ಕವನ
ಬಚ್ಚಿಟ್ಟ ಭಾವಗಳ ಕನ್ನಡೀಕರಣ
ಪಲ್ಲವಿಸುವಾ ಮನಕೆ ಶಬ್ದಗಳ ಚರಣ
ಪದಗಳಲಿ ಪೋಣಿಸಿದ ಚಂದದಾಭಾರ




ಸಾಲುಸಾಲುಗಳಲ್ಲಿ ಸಾಲು ದೀಪದ ಬೆಳಕು
ನೂರೆಂಟು ಅರ್ಥಗಳು, ನೂರು ನೆನಪಿನ ಮೆಲಕು
ಹೊಸ ಹೊಸತು ಬಿತ್ತರದ ಆಶಯವು ದಿನದಿನಕು  
ಹೊಸ ಭಾವಲೋಕಗಳ ಪರಿಚಯವು ಮನಮನಕು




ಪಲ್ಲವಿಯ ಪಂಕ್ತಿಗಳ ಪದಪುಂಜ ಅಂದ
ಚರಣ ಚೆಲ್ಲುವ ಚೆಲುವ ಚೈತ್ರಗಳೇ ಚಂದ
ನೂರಾರು ಬಣ್ಣಗಳು ಕವನಗಳ ಸೊಗಸಿನಲಿ
ನವ್ಯತೆಯ ಆಗಸವು ಬೊಗಸೆಯಲ್ಲಿ!! 







ಶುಕ್ರವಾರ, ಜನವರಿ 13, 2012

ಹಾಸ್ಯ




ಹೊಸತು ಭಾವಗಳಿಂದ ಹೊಸತು ಜೀವಗಳಿಂದ
ಹಳೆಯ ಗತ ಭೂತಗಳನೆಲ್ಲ ಮರೆತು
ಮೂಡಿ ಬರುವಾ ನಗೆಯು ಸಂತಸದ ಸಂಕೇತ
ಚಿಮ್ಮುವುದು ಚಿಲುಮೆಯಲಿ ಹೃದಯ ತೆರೆದು



ಹಾಸ್ಯವದು ಉಸಿರಂತೆ ಹೃದಯವಂತಿಕೆಗೆಲ್ಲ
ಉಸಿರಂತೆ ಹೊಸತು ನಸುನಗೆಗೆಲ್ಲಕೂ
ಲಘುನಗೆಯ ಗೆಳೆತನವೇ ಸಂಜೀವಿನಿಯ ಚಿಲುಮೆ
ದುರಿತಕ್ಕು ದುಃಖ ದುಮ್ಮಾನಗಳಿಗೂ


ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ
ಕಾವ್ಯದಲಿ ಕಗ್ಗದಲಿ ಎಲ್ಲ ಲಿಖಿತ
ಕಾಸು ಕರಿಮಣಿ ಇಲ್ಲ ದಿವ್ಯ ಔಷಧಿಗಿಲ್ಲಿ
ಹಾಸ್ಯ ಹುರುಪಿನ ಸೆಲೆಯು ಅರ್ಥಸಹಿತ


ಬನ್ನಿ ಅನುಭವಿಸೋಣ ಮನಸಾರೆ ಸುಖಿಸೋಣ
ಬದುಕಲ್ಲಿ ಮುಕ್ತ ಹಾಸ್ಯವನು ತುಂಬಿ
ತೆರೆದ ಬಾನಿನ ತೆರದಿ ಜಲಪಾತದಂದದಲಿ
ಹೀಗೊಮ್ಮೆ ನಕ್ಕುಬಿಡಿ ಹೃದಯತುಂಬಿ

ಭಾನುವಾರ, ಡಿಸೆಂಬರ್ 4, 2011

ಶೀರ್ಷಿಕೆ


ಎದೆಯ ಹೂದೋಟದಲಿ
        ಮೊಗ್ಗು ಬಿರಿಯುವ ಮೌನ
ಕಣ್ಣ ಭಾಷೆಯ ಅನುವಾದದಲಿ
        ಮನ ತಲ್ಲೀನ. 


                                ತಾರೆಗಳ ಬೆಳಕಲ್ಲಿ 
                                  ತೆರೆವ ಆಗಸಯಾನ
                           ವರ್ಷ ಋತುವಿನ ಹಾಗೆ 
                                ಮಳೆ ಇಳೆಯ ಸಮ್ಮಿಲನ.


ಘಳಿಗೆಗಳ ಬಡ್ಡಿಕಾಸಿಗೆ 
       ಕೊಂಡ ಮಾತುಗಳು
ನಿದಿರೆಯನು ಅಡವಿಟ್ಟು 
       ಪಡೆದ ಹೊಸ ಕನಸುಗಳು
                             
                              ಎಷ್ಟೆಷ್ಟು ದೋಚಿದರೂ 
                                  ಖಾಲಿಯಾಗದ ಮುಗುಳು
                              ಮೇಘಸಂದೇಶಕ್ಕೆ 
                                  ಸಾಕ್ಷಿಯಾಗುವ ಇರುಳು.


ಮುಂಜಾನೆ ಮುಸ್ಸಂಜೆ 
        ಹೊತ್ತು ಗೊತ್ತುಗಳೇಕೆ 
ಹಿತವಾಗಿ ಪೀಡಿಸುವ
        ನೆನೆಪುಗಳ ದಿಬ್ಬಣಕೆ
                              
                             ನೂರು ಬಣ್ಣವ ತೆರೆವ 
                                   ಭಾವಗಳ ಬತ್ತಳಿಕೆ
                             ಒಲವ ಶೀರ್ಷಿಕೆ 
                                   ನನ್ನ ಈ ಕನಸ ಕವನಕ್ಕೆ!