ಭಾನುವಾರ, ಡಿಸೆಂಬರ್ 4, 2011

ಶೀರ್ಷಿಕೆ


ಎದೆಯ ಹೂದೋಟದಲಿ
        ಮೊಗ್ಗು ಬಿರಿಯುವ ಮೌನ
ಕಣ್ಣ ಭಾಷೆಯ ಅನುವಾದದಲಿ
        ಮನ ತಲ್ಲೀನ. 


                                ತಾರೆಗಳ ಬೆಳಕಲ್ಲಿ 
                                  ತೆರೆವ ಆಗಸಯಾನ
                           ವರ್ಷ ಋತುವಿನ ಹಾಗೆ 
                                ಮಳೆ ಇಳೆಯ ಸಮ್ಮಿಲನ.


ಘಳಿಗೆಗಳ ಬಡ್ಡಿಕಾಸಿಗೆ 
       ಕೊಂಡ ಮಾತುಗಳು
ನಿದಿರೆಯನು ಅಡವಿಟ್ಟು 
       ಪಡೆದ ಹೊಸ ಕನಸುಗಳು
                             
                              ಎಷ್ಟೆಷ್ಟು ದೋಚಿದರೂ 
                                  ಖಾಲಿಯಾಗದ ಮುಗುಳು
                              ಮೇಘಸಂದೇಶಕ್ಕೆ 
                                  ಸಾಕ್ಷಿಯಾಗುವ ಇರುಳು.


ಮುಂಜಾನೆ ಮುಸ್ಸಂಜೆ 
        ಹೊತ್ತು ಗೊತ್ತುಗಳೇಕೆ 
ಹಿತವಾಗಿ ಪೀಡಿಸುವ
        ನೆನೆಪುಗಳ ದಿಬ್ಬಣಕೆ
                              
                             ನೂರು ಬಣ್ಣವ ತೆರೆವ 
                                   ಭಾವಗಳ ಬತ್ತಳಿಕೆ
                             ಒಲವ ಶೀರ್ಷಿಕೆ 
                                   ನನ್ನ ಈ ಕನಸ ಕವನಕ್ಕೆ!

ಭಾನುವಾರ, ಅಕ್ಟೋಬರ್ 9, 2011

ಸಂಭ್ರಮದ ಸವಿ ಸಮಯ

ಹನಿಗವನಗಳು ಮೂಡಿ ಬರುವ ಸಮಯ
ಸಿಹಿಗನಸುಗಳು ಕಾಡಿ ಬರುವ ಸಮಯ
ನನಗಾಗಿ ಒಲವೆಂಬ ಸವಿಯ ಸುಧೆಯ
ನಲುಮೆಯಾ ಪ್ರಿಯಕರನು ತರುವ ಸಮಯ

                                    ಹಸಿವೆಯೂ ಹಿತವಾಗಿ ಬರುವ ಸಮಯ
                                    ನಿದಿರೆಯ ಮಧುರವಾಗಿ ಮರೆವ ಸಮಯ
                                    ನನ್ನ ನಿನ್ನಯ ನಡುವೆ ಸಣ್ಣ ತೆರೆಯ 
                                    ಸರಿಸುತ್ತ ಸನಿಹಕ್ಕೆ ಬರುವ ಸಮಯ

ಪ್ರೇಮ ಪತ್ರಗಳನ್ನು ಬರೆವ ಸಮಯ
ಈ ನಿವೇದನೆ ನಿನಗೆ ತರುವ ಸಮಯ
ಕಿವಿಗೊಟ್ಟು ಕೇಳುತ್ತ ನನ್ನ ಕರೆಯ
ಒಪ್ಪಿ  ನೀ  ಓಲೈಸಿ ಬರುವ ಸಮಯ 


ಶನಿವಾರ, ಜುಲೈ 30, 2011

ಪರಿಚಯ




ನಿನ್ನ ಕಂಗಳು 
    ನನ್ನ ಸೆಳೆಯಲೆಂದೇ 
             ತಾಲೀಮು ನಡೆಸಿದಂತೆ 


ನಿನ್ನ ನುಡಿಗಳು 
    ನನ್ನ ಮಾತುಗಳ ಬಂಧಿಸಿ
              ಮೌನಿಯಾಗಿಸುವಂತೆ 

ನಿನ್ನ ನಗೆ 
   ನನ್ನ ನೋವುಗಳಿಗೆ 
               ಮುಲಾಮು ಹಚ್ಚಿದಂತೆ 

ನಿನ್ನೊಲವು
    ಹೊಸದಾದ ನನ್ನನ್ನು
               ನನಗೇ ಪರಿಚಯಿಸಿದಂತೆ


ಗುರುವಾರ, ಜೂನ್ 2, 2011

ನಿನ್ನೊಳಿದೆ ನನ್ನ ಮನವು....

ನದಿಯ ದಂಡೆಯ ಮೇಲೆ
ಸುಖವಾದ ಸಂಜೆಯಲಿ
ಒಬ್ಬಳೇ ಕುಳಿತಿರಲು ದಿಟ್ಟಿಸುತ್ತ
     
             ತಂಗಾಳಿ ಹಿತವಾಗಿ
             ಕೆನ್ನೆಗಳ ಸ್ಪರ್ಶಿಸಿದೆ
             ಕಣ್ಣ ಹನಿಗಳ ಮೆಲ್ಲ ಒಣಗಿಸುತ್ತ


ಕಾಡುತಿಹ ನೆನಪುಗಳ
ದೂಡುವಾ ಯತ್ನದಲಿ
ಸಾಗುತಿಹೆ ಮೌನಡೆದೆ ಪಯಣಿಸುತ್ತ
              
               ದಣಿದೆರೆಡು ನಯನಗಳ
               ರೆಪ್ಪೆಗಳು ಅಪ್ಪಿಹವು
               ಎದೆಯ ಭಾರವ ಮೆಲ್ಲ ಕರಗಿಸುತ್ತ


ನೀರಿನಲೆಗಳು ಹರಿದು
ಪಾದಗಳ ಚುಂಬಿಸಿವೆ
ಹಿತವಾಗಿ ಬೆರಳುಗಳ ಸ್ಪರ್ಶಿಸುತ್ತ
        
                ದೂರದಾ ಚಂದಿರನ
                ಹಾಲು ಬೆಳದಿಂಗಳದು
                ತಂಪನೆರೆದಿದೆ ಮನವ ಬೆಳಗಿಸುತ್ತ


ಎಲ್ಲ ತರಹದ ಚಿಂತೆ
ಭೂತಕಾಲದ ಸಂತೆ
ಕೊಚ್ಚಿಹೋಗಿದೆ ಇಂದು ನೀರಿನತ್ತ


                   ಇಂದಿನಾ ಸಂಜೆಯದು
                    ನನಗಾಗಿ, ನಾನಿಲ್ಲಿ
                    ನಾನಾಗಿ ಜೀವಿಸಿಹೆ ನಸುನಗುತ್ತ
ನನ್ನ ಈ ಏಕಾಂತ
ನೆಮ್ಮದಿಯ ಹುಡುಕಾಟ
ಸುಖವಾಗಿ ಸವಿದಿಹೆನು ಅನುಭವಿಸುತ
                
                     ಕ್ಷಣಿಕ ಸುಖವಿದು ನಲ್ಲ
                     ಮತ್ತೆ ನಿನ್ನಯ ನೆನಪ
                     ಜಾಡು ಹಿಡಿದಿದೆ ಮನವು ಕನವರಿಸುತ
              
                 

ಭಾನುವಾರ, ಏಪ್ರಿಲ್ 10, 2011

ಭಾವನಾ

ತುಟಿಯ ನಸುನಗೆಯಲ್ಲಿ ಭಾವಗೀತೆಯ ಹೆಣೆದು,
ಕಣ್ಣ ಹನಿಗಳ ಲಯಕೆ ಮಟ್ಟು ಹಾಕುತ ಕುಣಿದು,
ಬೆಳಗಿ ಭಾವದ ಜ್ಯೋತಿ ಮನದ ಮಂಟಪದಲ್ಲಿ,
ಹೃದಯಗಳನರಳಿಸುವ  ಕನಸುಗಳ ಬೆಳಕಲ್ಲಿ.
              
                     ಕೋಪ ತಾಪವ ಕಳೆದು, ಕುಗ್ಗಿಸುತ ದುಃಖಗಳ,
                     ಸಿಕ್ಕ ಸುಖಗಳ ಪಾಲನನುಭವಿಸುವ...
                     ಭಾವದೇವಿಯೆ ಬೆಳಕು ಸಿಹಿ ಕನಸುಗಳ ಮೆಲುಕು,
                     ಹೊಸಬಾನು, ಹೊಸಭಾವದಲಿ ಹಾರುವ.....

ಗುರುವಾರ, ಜನವರಿ 27, 2011

ನನ್ನ ಗತಿಯೇನು....??

ಮಿಂಚಂತೆ ಆಕರ್ಷಿಸುವ
    ಆ ನಿನ್ನ ನಗೆಯೇನು...?
ಮುತ್ತುಗಳಂತೆ ಕಂಗೊಳಿಸುವ
    ಆ ಕಣ್ಣ ಹೊಳಪೇನು...??

ಕಣ್ಣಲ್ಲಿ ಕಣ್ಣಿಟ್ಟು ನಿನ್ನ ನಾ ನೋಡುವಾಗ,
  ಕಂಗಳಲೆ ಪ್ರೇಮ ಕವಿತೆಯ ನೀ ಬರೆದರೆ,
                                       ನನ್ನ ಗತಿಯೇನು...??